ಥಾಯ್‌ಲೆಂಡಿನ ಶಾಲಾಮಕ್ಕಳಿಗೆ ಸಹಾಯ ಮಾಡಿದ ಅಭಿಯಾನ
ಶಾಲೆಯಲ್ಲಿ ಯಶಸ್ಸು ಪಡೆಯಲು ಮಕ್ಕಳಿಗೆ ಸಹಾಯ ಮಾಡಬೇಕೆಂದು ಥಾಯ್‌ಲೆಂಡ್‌ನಲ್ಲಿ 2012ರ ಡಿಸೆಂಬರ್‌ನಿಂದ ಯೆಹೋವನ ಸಾಕ್ಷಿಗಳು ವಿಶೇಷ ಅಭಿಯಾನವನ್ನು ಆರಂಭಿಸಿದರು. ಸುಮಾರು 20 ಸಾಕ್ಷಿಗಳು ಬ್ಯಾಂಕಾಕ್‌ನ ಶಾಲೆಗಳ ಮುಖ್ಯಸ್ಥರನ್ನು ಸಂದರ್ಶಿಸಿದರು. ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ, 2012ರ ಅಕ್ಟೋಬರ್ ತಿಂಗಳಿನ “ಹೌ ಟು ಸಕ್ಸೀಡ ಅಟ್ ಸ್ಕೂಲ್” (ಇಂಗ್ಲೀಷ್) ಎಂಬ ಎಚ್ಚರ! ಪತ್ರಿಕೆಯನ್ನು ನೀಡಿದರು.
ಈ ಅಭಿಯಾನ ತುಂಬ ಚೆನ್ನಾಗಿ ನಡೆದದ್ದರಿಂದ ಇಡೀ ದೇಶದಲ್ಲೆಲ್ಲಾ ಇದನ್ನು ಮುಂದುವರಿಸಿದರು. ಮುಂದಿನ ಒಂದೂವರೆ ವರ್ಷದಲ್ಲಿ 830 ಶಾಲೆಗಳನ್ನು ಭೇಟಿ ಮಾಡಿದರು. ಮಕ್ಕಳು ಮತ್ತು ಶಿಕ್ಷಕರಿಂದ ಆ ಎಚ್ಚರ! ಪತ್ರಿಕೆಗೆ ಎಷ್ಟು ಬೇಡಿಕೆ ಬಂತೆಂದರೆ ಅದನ್ನು ಮೂರು ಬಾರಿ ಮರು ಮುದ್ರಿಸಲಾಯಿತು. 2012ರ ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೇವಲ 30,000 ಪತ್ರಿಕೆಗಳ ಬೇಡಿಕೆ ಇತ್ತಷ್ಟೆ. ಆದರೆ ನಂತರ ಈ ಪತ್ರಿಕೆ ಎಷ್ಟು ಜನಪ್ರಿಯವಾಯಿತೆಂದರೆ ಒಟ್ಟು 6 ಲಕ್ಷ 50 ಸಾವಿರ ಪ್ರತಿಗಳನ್ನು ಹಂಚಲಾಯಿತು!
ಶಾಲಾ ಆಡಳಿತಾಧಿಕಾರಿಗಳು ಮತ್ತು ಶಿಕ್ಷಕರು ಈ ಪತ್ರಿಕೆಯ ಮಹತ್ವವನ್ನು ಬೇಗನೆ ತಿಳಿದುಕೊಂಡರು. ಒಬ್ಬ ಶಿಕ್ಷಕಿ ಹೇಳಿದ್ದು, “ಮಕ್ಕಳು ತಮ್ಮ ಕುಟುಂಬದೊಂದಿಗೆ ಆಪ್ತರಾಗಲು ಮತ್ತು ಒಳ್ಳೆಯ ಗುರಿಗಳನ್ನಿಡಲು ಈ ಪತ್ರಿಕೆ ಸಹಾಯಮಾಡುತ್ತದೆ.” ಕೆಲವು ಶಾಲೆಗಳಂತೂ ಈ ಪತ್ರಿಕೆಯಲ್ಲಿದ್ದ ಮಾಹಿತಿಯನ್ನು ಶಾಲಾ ಪಾಠಗಳಲ್ಲೂ ಉಪಯೋಗಿಸಿದವು. ಇನ್ನು ಕೆಲವು ಶಾಲೆಗಳು ತರಗತಿಯಲ್ಲಿ ಇದನ್ನು ಓದಲು ಏರ್ಪಾಡು ಮಾಡಿದವು. ಇನ್ನೊಂದು ಶಾಲೆಯಲ್ಲಿ ಈ ಪತ್ರಿಕೆಯ ವಿಷಯದ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ಇಟ್ಟು, ಉತ್ತಮವಾಗಿ ಬರೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಕೂಡ ವಿತರಿಸಲಾಯಿತು.
ಒಬ್ಬ ವಿದ್ಯಾರ್ಥಿನಿ ಈ ಪತ್ರಿಕೆಯಲ್ಲಿದ್ದ “ವಿನ್ನಿಂಗ್ ದಿ ವಾರ್ ಅಗೇನ್‌ಸ್ಟ್ ಒಬೆಸಿಟಿ ಇನ್ ದಿ ಯಂಗ್” ಎಂಬ ಲೇಖನವನ್ನು ಪ್ರಶಂಸಿಸಿದಳು. “ಒಬೆಸಿಟಿ (ಸ್ಥೂಲಕಾಯ) ಇತ್ತೀಚೆಗಿರುವ ಒಂದು ಸಾಮಾನ್ಯ ಸಮಸ್ಯೆ. ನನ್ನ ಫ್ರೆಂಡ ಇದರ ಬಗ್ಗೆ ಮಾತಾಡಲು ಮುಜುಗರಪಡುತ್ತಾರೆ. ಇದರಲ್ಲಿರುವ ವಿಷಯ ಅರ್ಥಮಾಡಿಕೊಳ್ಳಲು ಮತ್ತು ಅನ್ವಯಿಸಿಕೊಳ್ಳಲು ಸುಲಭವಾಗಿದೆ. ಈ ಪತ್ರಿಕೆಗಾಗಿ ನಿಮಗೆ ಧನ್ಯವಾದಗಳು” ಎಂದು ಆ ವಿದ್ಯಾರ್ಥಿನಿ ಹೇಳಿದಳು.
ಹೆತ್ತವರು ಸಹ ಈ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪತ್ರಿಕೆಯನ್ನು ಮನೆಗೆ ತಂದು ಕೊಟ್ಟ ಸಾಕ್ಷಿಗೆ ಧನ್ಯವಾದ ತಿಳಿಸುತ್ತಾ ಒಬ್ಬ ತಾಯಿ, “ಶಾಲೆಯಲ್ಲಿ ಚೆನ್ನಾಗಿ ಕಲಿತುಕೊಳ್ಳಲು ಇದರಲ್ಲಿರುವ ಮಾಹಿತಿ ಮಕ್ಕಳಿಗೆ ಸಹಾಯಮಾಡುತ್ತದೆ” ಎಂದು ಹೇಳಿದಳು.
ಥಾಯ್‌ಲೆಂಡ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಪ್ರತಿನಿಧಿ ಪಿಚೈ ಪೀಟ್ರಾಟ್ಯೋಟಿನ್ ಎಂಬವರು “ಎಚ್ಚರ! ಪತ್ರಿಕೆ ಜನರಿಗೆ ಸಹಾಯವಾಗುವ ಬೈಬಲಿನ ವಿವೇಕವನ್ನು ಸಾರಿ ಹೇಳುತ್ತದೆ. ವಿದ್ಯಾಭ್ಯಾಸದ ಮಹತ್ವ ಯೆಹೋವನ ಸಾಕ್ಷಿಗಳಾದ ನಮಗೆ ತಿಳಿದಿದೆ, ಆದ್ದರಿಂದ ಈ ಪತ್ರಿಕೆಯನ್ನು ನಾವು ಎಲ್ಲರಿಗೂ ಉಚಿತವಾಗಿ ಕೊಡುತ್ತಿದ್ದೇವೆ” ಎಂದು ಹೇಳಿದರು.