ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದ ಜೀವನಮಾರ್ಗ

ಕ್ಷಮೆ

ಕ್ಷಮೆ

“ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ತುಂಬ ಬೈಗುಳ, ಕಿರಿಚಾಟ ಇದೆಲ್ಲ ಕೇಳುತ್ತಿದ್ದೆ. ಹಾಗಾಗಿ ನಾನು ಕ್ಷಮಿಸುವುದನ್ನು ಕಲಿಯಲಿಲ್ಲ. ದೊಡ್ಡವಳಾದ ಮೇಲೂ ಬೇರೆಯವರು ನನ್ನನ್ನು ನೋಯಿಸಿದ್ದರ ಬಗ್ಗೆಯೇ ಅನೇಕ ದಿನಗಳ ವರೆಗೆ ಯೋಚಿಸುತ್ತಾ ಇರುತ್ತಿದ್ದೆ, ನಿದ್ದೆ ಬರುತ್ತಿರಲಿಲ್ಲ” ಎಂದು ಪೆಟ್ರಿಶ್ಯಾ ಎಂಬಾಕೆ ಹೇಳುತ್ತಾಳೆ. ಕೋಪ, ಅಸಮಾಧಾನದಿಂದ ಕೂಡಿದ ಜೀವನದಲ್ಲಿ ಸಂತೋಷ ಇರುವುದಿಲ್ಲ, ಅಂಥವರಿಗೆ ಒಳ್ಳೇ ಆರೋಗ್ಯವೂ ಇರುವುದಿಲ್ಲ. ನಡೆಸಲಾದ ಅಧ್ಯಯನಗಳಿಗನುಸಾರ ಕ್ಷಮಿಸದೆ ಇರುವ ಜನರು ಬಹುಶಃ . . .

  • ಕೋಪ, ಕಹಿಭಾವನೆಯು ಸಂಬಂಧಗಳನ್ನು ಹಾಳುಮಾಡುವಂತೆ ಬಿಡುತ್ತಾರೆ. ಇದರಿಂದಾಗಿ ಎಲ್ಲರಿಂದಲೂ ಪ್ರತ್ಯೇಕರಾಗುತ್ತಾರೆ ಮತ್ತು ಇದು ಒಂಟಿತನಕ್ಕೆ ನಡೆಸುತ್ತದೆ

  • ಬೇಗ ನೊಂದುಕೊಳ್ಳುತ್ತಾರೆ, ಚಿಂತೆಗೆ ಅಥವಾ ತೀವ್ರ ಖಿನ್ನತೆಗೂ ಗುರಿಯಾಗುತ್ತಾರೆ

  • ತಪ್ಪಿನ ಬಗ್ಗೆಯೇ ಎಷ್ಟು ಯೋಚಿಸುತ್ತಾರೆಂದರೆ ಜೀವನದಲ್ಲಿ ಆನಂದವನ್ನೇ ಕಳೆದುಕೊಳ್ಳುತ್ತಾರೆ

  • ಕ್ಷಮಿಸದೇ ಇರುವುದರಿಂದ ಅವರ ಮನಸ್ಸು ಚುಚ್ಚುತ್ತಾ ಇರುತ್ತದೆ

  • ಅತಿಯಾದ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಜೊತೆಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಮತ್ತು ನೋವಿನ ಕಾಯಿಲೆಗಳಾದ ಸಂಧಿವಾತ (ಆರ್ತರೈಟಿಸ್‌) ಹಾಗೂ ತಲೆನೋವು ಮುಂತಾದವು ಬರುವ ಅಪಾಯ ಹೆಚ್ಚಾಗುತ್ತದೆ a

ಕ್ಷಮೆ ಎಂದರೇನು? ನಮಗೆ ನೋಯಿಸಿದವರ ತಪ್ಪನ್ನು ಮನ್ನಿಸುವುದು ಮತ್ತು ಕೋಪ, ಅಸಮಾಧಾನ ಹಾಗೂ ಸೇಡುತೀರಿಸುವ ಯೋಚನೆಗಳನ್ನು ಬಿಟ್ಟುಬಿಡುವುದೇ ಕ್ಷಮೆ ಆಗಿದೆ. ಹಾಗಂತ ಅದರರ್ಥ ಅವರು ಮಾಡಿದ ತಪ್ಪಿಗೆ ಸಮ್ಮತಿ ಕೊಡುವುದು ಇಲ್ಲವೆ ಅದು ಅಷ್ಟೇನೂ ದೊಡ್ಡದಲ್ಲವೆಂಬಂತೆ, ಏನೂ ಆಗೇ ಇಲ್ಲವೆಂಬಂತೆ ನಡೆದುಕೊಳ್ಳುವುದಲ್ಲ. ಬದಲಿಗೆ ಕ್ಷಮಿಸುವುದು, ಚೆನ್ನಾಗಿ ಯೋಚಿಸಿ ಮಾಡಿದ ಸ್ವಂತ ಆಯ್ಕೆ ಆಗಿದೆ. ಪ್ರೀತಿಯ ಈ ನಿರ್ಧಾರವು, ಶಾಂತಿ ಕಾಪಾಡಿಕೊಳ್ಳುವುದು ಮತ್ತು ಆ ವ್ಯಕ್ತಿಯೊಂದಿಗೆ ಒಳ್ಳೇ ಸಂಬಂಧ ಬೆಸೆಯುವುದು ಇಲ್ಲವೆ ಕಾಪಾಡಿಕೊಳ್ಳುವುದೇ ನಿಮಗೆ ತುಂಬ ಮುಖ್ಯ ಎಂದು ತೋರಿಸಿಕೊಡುತ್ತದೆ.

ಕ್ಷಮಿಸುವ ವ್ಯಕ್ತಿ ಅರ್ಥಮಾಡಿಕೊಳ್ಳುವ ಸ್ವಭಾವ ತನಗಿದೆ ಎಂದೂ ತೋರಿಸುತ್ತಾನೆ. ನಾವೆಲ್ಲರೂ ನಡೆನುಡಿಯಲ್ಲಿ ತಪ್ಪು ಅಥವಾ ಪಾಪ ಮಾಡುತ್ತೇವೆ ಎಂದವನು ಅರ್ಥಮಾಡಿಕೊಳ್ಳುತ್ತಾನೆ. (ರೋಮನ್ನರಿಗೆ 3:23) ಈ ವಿಷಯದ ಬಗ್ಗೆ ಬೈಬಲ್‌ ಹೀಗನ್ನುತ್ತದೆ: “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು . . . ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

ಇದೆಲ್ಲದರಿಂದ ಕ್ಷಮೆಯು “ಐಕ್ಯದ ಪರಿಪೂರ್ಣ ಬಂಧ” ಆಗಿರುವ ಪ್ರೀತಿಯ ಒಂದು ಮುಖ್ಯ ಅಂಶವಾಗಿದೆ ಎಂದು ಹೇಳಬಹುದು. (ಕೊಲೊಸ್ಸೆ 3:14) ಮೆಯೊ ಕ್ಲಿನಿಕ್‌ ವೆಬ್‌ಸೈಟಿನ ಪ್ರಕಾರ, ಕ್ಷಮಿಸುವಾಗ . . .

  • ಸಂಬಂಧಗಳು ಚೆನ್ನಾಗಿರುತ್ತವೆ, ನಮ್ಮನ್ನು ನೋಯಿಸಿದವರನ್ನು ಅರ್ಥಮಾಡಿಕೊಳ್ಳುತ್ತೇವೆ, ಅವರ ಕಡೆಗೆ ಪರಾನುಭೂತಿ, ಕರುಣೆ ತೋರಿಸುತ್ತೇವೆ

  • ಮನಸ್ಸು ಚೆನ್ನಾಗಿರುತ್ತದೆ ಮತ್ತು ದೇವರೊಟ್ಟಿಗೆ ಸಮಾಧಾನದ ಸಂಬಂಧ ಇರುತ್ತದೆ

  • ಚಿಂತೆ, ಮಾನಸಿಕ ಒತ್ತಡ, ಹಗೆ ಕಡಿಮೆಯಾಗುತ್ತದೆ

  • ಖಿನ್ನತೆಯ ಲಕ್ಷಣಗಳು ಬರುವುದು ಕಡಿಮೆ

ನಿಮ್ಮನ್ನು ನೀವೇ ಕ್ಷಮಿಸಿ. ನಮ್ಮನ್ನೇ ಕ್ಷಮಿಸಿಕೊಳ್ಳುವುದು “ಹೆಚ್ಚು ಕಷ್ಟದ ಕೆಲಸ” ಆಗಿರಬಲ್ಲದು. ಆದರೆ ಅದು ಮಾನಸಿಕ ಮತ್ತು ದೈಹಿಕ “ಆರೋಗ್ಯಕ್ಕೆ ತುಂಬ ಅಗತ್ಯ” ಎಂದು ಡಿಸೆಬಿಲಿಟಿ ಆ್ಯಂಡ್‌ ರಿಹ್ಯಾಬಿಲಿಟೇಶನ್‌ ಎಂಬ ಪತ್ರಿಕೆ ತಿಳಿಸುತ್ತದೆ. ನಿಮ್ಮನ್ನೇ ಕ್ಷಮಿಸಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡಬಲ್ಲದು?

  • ನಿಮ್ಮಿಂದ ತಪ್ಪೇ ಆಗಬಾರದು ಅಂತ ನಿರೀಕ್ಷಿಸಬೇಡಿ. ಎಲ್ಲರಂತೆ ನೀವೂ ತಪ್ಪು ಮಾಡುತ್ತೀರೆಂಬ ಸತ್ಯವನ್ನು ಒಪ್ಪಿಕೊಳ್ಳಿ.—ಪ್ರಸಂಗಿ 7:20

  • ನಿಮ್ಮ ತಪ್ಪುಗಳಿಂದ ಕಲಿಯಿರಿ. ಆಗ ಅವುಗಳನ್ನು ಪುನಃ ಮಾಡುವುದು ಕಡಿಮೆ

  • ತಾಳ್ಮೆ ಇರಲಿ. ನಿಮ್ಮಲ್ಲಿರುವ ಕೆಲವು ಕುಂದುಕೊರತೆಗಳು ಮತ್ತು ಕೆಟ್ಟ ರೂಢಿಗಳು ಬೆಳಗಾಗುವಷ್ಟರಲ್ಲಿ ಹೋಗಲಿಕ್ಕಿಲ್ಲ.—ಎಫೆಸ 4:23, 24

  • ಪ್ರೋತ್ಸಾಹ ಕೊಡುವಂಥ, ಸಕಾರಾತ್ಮಕ ಮನೋಭಾವದ, ದಯೆಯುಳ್ಳ ಮತ್ತು ಇದ್ದದ್ದನ್ನು ಇದ್ದ ಹಾಗೆ ಹೇಳುವ ಸ್ನೇಹಿತರೊಂದಿಗೆ ಸಹವಾಸ ಮಾಡಿ.—ಜ್ಞಾನೋಕ್ತಿ 13:20

  • ನೀವು ಯಾರಿಗಾದರೂ ನೋವು ಮಾಡಿದ್ದರೆ ಅದನ್ನು ಒಪ್ಪಿಕೊಂಡು ಬೇಗನೆ ಕ್ಷಮೆ ಕೇಳಿ. ಅವರೊಂದಿಗೆ ಸಮಾಧಾನ ಮಾಡಿಕೊಂಡಾಗ ನಿಮಗೆ ನೆಮ್ಮದಿ ಇರುತ್ತದೆ.—ಮತ್ತಾಯ 5:23, 24

ಬೈಬಲ್‌ ತತ್ವಗಳಿಂದ ಪ್ರಯೋಜನ ಖಂಡಿತ!

ಈ ಲೇಖನದ ಆರಂಭದಲ್ಲಿ ತಿಳಿಸಲಾದ ಪೆಟ್ರಿಶ್ಯಾ ಬೈಬಲ್‌ ಅಧ್ಯಯನ ಮಾಡಿದ ನಂತರ ಕ್ಷಮಿಸಲು ಕಲಿತಳು. “ನನ್ನ ಜೀವನದಲ್ಲಿ ವಿಷತುಂಬಿಸಿದ್ದ ಕೋಪದಿಂದ ಈಗ ಮುಕ್ತಳಾಗಿದ್ದೇನೆ. ನನಗೀಗ ಮನಸ್ಸಲ್ಲಿ ನೋವಿಲ್ಲ, ಬೇರೆಯವರಿಗೂ ನೋವು ಕೊಡುವುದಿಲ್ಲ. ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮ್ಮ ಒಳ್ಳೇದನ್ನೇ ಬಯಸುತ್ತಾನೆ ಎಂಬ ಸಂಗತಿಯನ್ನು ಬೈಬಲ್‌ ತತ್ವಗಳು ದೃಢೀಕರಿಸುತ್ತವೆ” ಎಂದು ಆಕೆ ಬರೆಯುತ್ತಾಳೆ.

ರಾನ್‌ ಎಂಬ ವ್ಯಕ್ತಿ ಹೀಗನ್ನುತ್ತಾನೆ: “ಬೇರೆಯವರ ಯೋಚನೆ ಮತ್ತು ಕ್ರಿಯೆಗಳನ್ನು ನಾನು ನಿಯಂತ್ರಿಸಲಿಕ್ಕಾಗಲ್ಲ. ಆದರೆ ನನ್ನ ಯೋಚನೆ, ಕ್ರಿಯೆಗಳನ್ನು ನಿಯಂತ್ರಿಸಬಲ್ಲೆ. ನನಗೆ ಸಮಾಧಾನ ಬೇಕೆಂದರೆ ಅಸಮಾಧಾನವನ್ನು ಬಿಟ್ಟುಬಿಡಬೇಕು. ಸಮಾಧಾನ ಮತ್ತು ಅಸಮಾಧಾನವನ್ನು ಉತ್ತರ ಮತ್ತು ದಕ್ಷಿಣ ದಿಕ್ಕುಗಳೆಂದು ವೀಕ್ಷಿಸಲು ಆರಂಭಿಸಿದೆ. ಒಂದೇ ಸಮಯದಲ್ಲಿ ನಾನು ಈ ಎರಡೂ ದಿಕ್ಕುಗಳಲ್ಲಿರಲು ಸಾಧ್ಯವಿಲ್ಲ. ಈಗ ನನಗೆ ಒಳ್ಳೇ ಮನಸ್ಸಾಕ್ಷಿ ಇದೆ.”

a ಮೂಲಗಳು: ಮೆಯೊ ಕ್ಲಿನಿಕ್‌ ಮತ್ತು ಜಾನ್ಸ್‌ ಹಾಪ್ಕಿನ್ಸ್‌ ಮೆಡಿಸಿನ್‌ ವೆಬ್‌ಸೈಟ್‌ಗಳು ಮತ್ತು ಸೋಷಿಯಲ್‌ ಸೈಕಿಯಾಟ್ರಿ ಆ್ಯಂಡ್‌ ಸೈಕಿಯಾಟ್ರಿಕ್‌ ಎಪಿಡೆಮಿಯೋಲಾಜಿ ಎಂಬ ಪತ್ರಿಕೆ.