ಪಾಠ 3
ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು
ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಅಂದರೇನು?
ಸನ್ನಿವೇಶಗಳಿಗೆ ಹೊಂದಿಕೊಳ್ಳುವ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಕಷ್ಟದ ಸನ್ನಿವೇಶ ಬಂದರೂ, ಸೋಲನ್ನು ಅನುಭವಿಸಿದರೂ ಬೇಗನೇ ಚೇತರಿಸಿಕೊಳ್ಳುತ್ತಾನೆ. ಈ ಸಾಮರ್ಥ್ಯ ಒಬ್ಬ ವ್ಯಕ್ತಿಗೆ ತುಂಬ ವರ್ಷದ ಅನುಭವದಿಂದ ಬರುತ್ತದೆ. ಒಂದು ಮಗು ಹೇಗೆ ಬೀಳದೆ ನಡೆಯಲು ಕಲಿಯುವುದಿಲ್ಲವೋ, ಹಾಗೆ ಒಬ್ಬ ವ್ಯಕ್ತಿ ಸೋಲನ್ನು ಅನುಭವಿಸದೆ ಜೀವನದಲ್ಲಿ ಮೇಲೆ ಬರಲು ಸಾಧ್ಯವಿಲ್ಲ.
ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಯಾಕೆ ಮುಖ್ಯ?
ಕೆಲವು ಮಕ್ಕಳು, ಒಂದು ವಿಷಯದಲ್ಲಿ ಗೆಲುವು ಸಿಗದಿದ್ದಾಗ, ಕಷ್ಟದ ಸನ್ನಿವೇಶ ಎದುರಾದಾಗ ಅಥವಾ ತಾವು ಮಾಡಿದ ವಿಷಯ ತಪ್ಪೆಂದು ಯಾರಾದರೂ ಹೇಳಿದಾಗ ನಿರುತ್ಸಾಹಗೊಳ್ಳುತ್ತಾರೆ. ಕೆಲವರಂತೂ ಪ್ರಯತ್ನವನ್ನೇ ಬಿಟ್ಟುಬಿಡುತ್ತಾರೆ. ಆದರೆ ಇಂಥ ಪರಿಸ್ಥಿತಿಗಳಲ್ಲಿ, ಅವರು ಈ ಕೆಳಗಿನ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು:
-
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ, ಯಾವಾಗಲೂ ಯಶಸ್ಸು ಸಿಗುತ್ತದೆ ಅಂತ ಹೇಳಲಿಕ್ಕಾಗುವುದಿಲ್ಲ.—ಯಾಕೋಬ 3:2.
-
ಎಲ್ಲರಿಗೂ ತಮ್ಮ ಜೀವನದಲ್ಲಿ ಕಷ್ಟದ ಸನ್ನಿವೇಶಗಳು ಬಂದೇ ಬರುತ್ತವೆ.—ಪ್ರಸಂಗಿ 9:11.
-
ಬೇರೆಯವರು ನಮ್ಮ ತಪ್ಪನ್ನು ತಿದ್ದಿದಾಗಲೇ ನಾವು ಕಲಿಯುತ್ತೇವೆ.—ಜ್ಞಾನೋಕ್ತಿ 9:9.
ಮಕ್ಕಳು ಕಷ್ಟದ ಸನ್ನಿವೇಶಗಳಿಂದ ಚೇತರಿಸಿಕೊಳ್ಳಲು ಕಲಿತರೆ ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ನಿಭಾಯಿಸುತ್ತಾರೆ.
ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಕಲಿಸುವುದು ಹೇಗೆ?
ಯಶಸ್ಸು ಸಿಗದಿದ್ದಾಗ.
ಬೈಬಲ್ ತತ್ವ: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.”—ಜ್ಞಾನೋಕ್ತಿ 24:16.
ಒಂದು ಸಮಸ್ಯೆ ಎದುರಾದಾಗ ಅದು ಗಂಭೀರವಾಗಿದೆಯಾ ಇಲ್ಲವಾ ಎಂದು ಗುರುತಿಸಲು ಮಕ್ಕಳಿಗೆ ಸಹಾಯಮಾಡಿ. ಉದಾಹರಣೆಗೆ, ಶಾಲೆಯ ಪರೀಕ್ಷೆಯಲ್ಲಿ ಫೇಲಾದಾಗ, “ನನ್ನಿಂದ ಏನೂ ಸರಿಯಾಗಿ ಮಾಡಕ್ಕಾಗಲ್ಲ” ಎಂದು ಪುನಃ ಪ್ರಯತ್ನಿಸಲಿಕ್ಕೇ ಹೋಗಲ್ವಾ?
ನಿಮ್ಮ ಮಕ್ಕಳಿಗೆ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಕಲಿಸಲಿಕ್ಕಾಗಿ, ಮುಂದಿನ ಸಲ ಹೇಗೆ ಇನ್ನೂ ಚೆನ್ನಾಗಿ ಮಾಡಬಹುದು ಎಂದು ಯೋಚಿಸಿ ತಿಳಿಯಲು ಸಹಾಯಮಾಡಿ. ಹೀಗೆ ಮಾಡಿದರೆ, ನಿಮ್ಮ ಮಕ್ಕಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಲಿಯುತ್ತಾರೆ, ನೊಂದು ಕುಗ್ಗಿಹೋಗುವುದಿಲ್ಲ.
ಅದೇ ಸಮಯದಲ್ಲಿ, ನಿಮ್ಮ ಮಕ್ಕಳ ಸಮಸ್ಯೆಯನ್ನು ನೀವು ಬಗೆಹರಿಸಬೇಡಿ. ಬದಲಿಗೆ, ಆ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂದು ಅವರೇ ಯೋಚಿಸುವಂತೆ ಬಿಡಿ. ನಿಮ್ಮ ಮಗು ಒಂದು ಪರೀಕ್ಷೆಯಲ್ಲಿ ಫೇಲಾಗಿದ್ದರೆ ಅವರಿಗೆ ಹೀಗೆ ಕೇಳಿ, “ಶಾಲೆಯಲ್ಲಿ ಕಲಿಸಲಾಗುವ ಪಾಠವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ನೀನು ಏನು ಮಾಡಬಹುದು?”
ದುರಂತಗಳು ಸಂಭವಿಸಿದಾಗ.
ಬೈಬಲ್ ತತ್ವ: “ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ.”—ಯಾಕೋಬ 4:14.
ಜೀವನದಲ್ಲಿ ಯಾವಾಗ ಏನು ಸಂಭವಿಸುತ್ತದೆಂದು ಹೇಳಲು ಆಗುವುದಿಲ್ಲ. ಇಂದು ಶ್ರೀಮಂತನಾಗಿರುವ ವ್ಯಕ್ತಿ ನಾಳೆ ಬಡವನಾಗಬಹುದು ಅಥವಾ
ಇಂದು ಆರೋಗ್ಯವಂತನಾಗಿ ಇರುವವನು ನಾಳೆ ಇದ್ದಕ್ಕಿದ್ದಂತೆ ಕಾಯಿಲೆಗೆ ತುತ್ತಾಗಬಹುದು. ‘ಯಾವಾಗಲೂ ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು,’ ಯಾಕೆಂದರೆ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂದು ಬೈಬಲ್ ಹೇಳುತ್ತದೆ.ಹೆತ್ತವರಾಗಿ ನೀವು, ನಿಮ್ಮ ಮಕ್ಕಳನ್ನು ಅಪಾಯಗಳಿಂದ ರಕ್ಷಿಸಲು ನಿಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತೀರ ನಿಜ. ಆದರೆ, ಪ್ರತಿಯೊಂದು ಸನ್ನಿವೇಶದಲ್ಲೂ ಅವರಿಗೆ ಸಹಾಯಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.
ನಿಮ್ಮ ಮಕ್ಕಳು ದುರಂತಗಳನ್ನು ಅನುಭವಿಸುವಾಗ, ಉದಾಹರಣೆಗೆ, ಗೆಳೆತನ ಮುರಿದು ಹೋದಾಗ ಅಥವಾ ಕುಟುಂಬದಲ್ಲಿ ಯಾರಾದರೂ ತೀರಿಹೋದಾಗ, ಆ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯಮಾಡಿ. ಹೀಗೆ ಮಾಡಿದರೆ ಅವರು ದೊಡ್ಡವರಾದ ಮೇಲೆ ಎದುರಾಗುವ ಹಣಕಾಸಿನ, ಕೆಲಸದ ಸಮಸ್ಯೆಗಳನ್ನು ಬಗೆಹರಿಸಲು ಕಲಿಯುತ್ತಾರೆ. a
ಯಾರಾದರೂ ಬುದ್ಧಿ ಹೇಳಿದಾಗ.
ಬೈಬಲ್ ತತ್ವ: “ಬುದ್ಧಿವಾದವನ್ನು ಕೇಳು . . . ಮುಂದೆ ಜ್ಞಾನಿಯಾಗುವಿ.”—ಜ್ಞಾನೋಕ್ತಿ 19:20.
ನಿಮ್ಮ ಮಕ್ಕಳು ತಪ್ಪು ಮಾಡಿದಾಗ ಯಾರಾದರೂ ಬುದ್ಧಿ ಹೇಳಿದರೆ, ಮಕ್ಕಳಿಗೆ ನೋವು ಮಾಡಲು ಅಥವಾ ಹೆದರಿಸಲು ಅವರು ಹೀಗೆ ಹೇಳುತ್ತಿದ್ದಾರೆ ಎಂದು ನೆನೆಸಬೇಡಿ. ಯಾಕೆಂದರೆ ಮಕ್ಕಳು ತಿದ್ದಿಕೊಳ್ಳುವಂತೆ ಸಹಾಯ ಮಾಡಲು ಅವರು ಬಯಸುತ್ತಾರೆ.
ನೀವು ನಿಮ್ಮ ಮಕ್ಕಳಿಗೆ ಬುದ್ಧಿವಾದಗಳನ್ನು ಸ್ವೀಕರಿಸಿ ತಿದ್ದಿಕೊಳ್ಳಲು ಕಲಿಸಿದರೆ, ನಿಮ್ಮಿಬ್ಬರಿಗೂ ಪ್ರಯೋಜನವಾಗುತ್ತದೆ. ಜಾನ್ ಎಂಬ ಒಬ್ಬ ತಂದೆ ಹೀಗೆ ಹೇಳುತ್ತಾರೆ: “ಮಕ್ಕಳು ತಪ್ಪುಮಾಡಿದಾಗ ಅದರ ಪರಿಣಾಮಗಳಿಂದ ಅವರನ್ನು ಯಾವಾಗಲೂ ರಕ್ಷಿಸುತ್ತಿದ್ದರೆ ಅವರು ಎಂದೂ ಅದರಿಂದ ಪಾಠ ಕಲಿಯುವುದಿಲ್ಲ. ಬದಲಿಗೆ, ಅವರು ಒಂದರ ನಂತರ ಇನ್ನೊಂದು ಸಮಸ್ಯೆಗಳನ್ನು ತಂದುಕೊಳ್ಳುತ್ತಲೇ ಇರುತ್ತಾರೆ ಮತ್ತು ನೀವದನ್ನು ಬಗೆಹರಿಸುತ್ತಲೇ ಇರಬೇಕಾಗುತ್ತದೆ. ನಿಮ್ಮ ಜೀವನ ಎಲ್ಲಾ ಅವರ ಹಿಂದೆನೇ ಕಳೆದುಹೋಗುತ್ತದೆ. ಇದರಿಂದಾಗಿ ನಿಮ್ಮ ಮತ್ತು ನಿಮ್ಮ ಮಕ್ಕಳ ಜೀವನ ಹಾಳಾಗುತ್ತೆ.”
ಬುದ್ಧಿಮಾತಿನಿಂದ ಪ್ರಯೋಜನ ಪಡೆದುಕೊಳ್ಳುವಂತೆ ನಿಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಅಥವಾ ಬೇರೆಯೆಲ್ಲಾದರೂ ಯಾರಾದರೂ ತಿದ್ದಿದರೆ ‘ಅವರು ಹಾಗೆ ಹೇಳಬಾರದಿತ್ತು’ ಎಂದು ಯಾವತ್ತೂ ಹೇಳಬೇಡಿ. ಬದಲಿಗೆ, ಹೀಗೆ ಕೇಳಿ:
-
“ನಿನ್ನನ್ನು ಅವರು ಯಾಕೆ ತಿದ್ದಿರಬಹುದು?”
-
“ನೀನು ಹೇಗೆ ತಿದ್ದಿಕೊಳ್ಳಬಹುದು?”
-
“ನಿನಗೆ ಮುಂದೆ ಯಾರಾದರೂ ಬುದ್ಧಿಮಾತು ಹೇಳಿದರೆ ಏನು ಮಾಡುತ್ತೀಯಾ?”
ಒಂದಂತೂ ನೆನಪಿಡಿ, ಬುದ್ಧಿಮಾತುಗಳು ನಿಮ್ಮ ಮಕ್ಕಳಿಗೆ ಈಗ ಮಾತ್ರ ಅಲ್ಲ, ಮುಂದೆ ದೊಡ್ಡವರಾದ ಮೇಲೂ ಸಹಾಯ ಮಾಡುತ್ತವೆ.
a ಜುಲೈ 1, 2008 ರ (ಇಂಗ್ಲಿಷ್) ಕಾವಲಿನಬುರುಜುವಿನಲ್ಲಿ ಇರುವ “ನೋವಿನಿಂದ ಚೇತರಿಸಿಕೊಳ್ಳಲು ನಿಮ್ಮ ಮಗುವಿಗೆ ಸಹಾಯಮಾಡಿ” ಎಂಬ ಲೇಖನ ನೋಡಿ.