ದೇವರ ದೃಷ್ಟಿಕೋನ
ನಂಬಿಕೆ
ಕೆಲವರು ತಮಗೆ ದೇವರಲ್ಲಿ ನಂಬಿಕೆ ಇದೆ ಅಂತ ಹೇಳುತ್ತಾರೆ. ಆದರೆ “ನಂಬಿಕೆ” ಅಂದರೇನು ಅಂತ ಅವರಿಗೆ ಗೊತ್ತೇ ಇರಲ್ಲ. ನಂಬಿಕೆ ಅಂದರೇನು ಮತ್ತು ಅದು ಯಾಕೆ ಮುಖ್ಯ?
ನಂಬಿಕೆ ಅಂದರೇನು?
ಜನರು ಏನು ಹೇಳುತ್ತಾರೆ?
ಅನೇಕ ಜನರು, ಒಂದು ವಿಷಯಕ್ಕೆ ಆಧಾರ ಇಲ್ಲದಿದ್ದರೂ ಸರಿ ಅದನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವುದೇ ನಂಬಿಕೆ ಅಂತ ನೆನಸುತ್ತಾರೆ. ಉದಾಹರಣೆಗೆ, ಧರ್ಮಶ್ರದ್ಧೆ ಇರುವ ವ್ಯಕ್ತಿ “ನಾನು ದೇವರನ್ನು ನಂಬುತ್ತೀನಿ” ಅಂತ ಹೇಳುತ್ತಾನೆ. ಆದರೆ “ಯಾಕೆ ನಂಬುತ್ತೀಯಾ?” ಅಂತ ಕೇಳಿದರೆ “ನನ್ನನ್ನು ಆ ರೀತಿ ಬೆಳೆಸಿದರು” ಅಥವಾ “ಅಪ್ಪ ಅಮ್ಮ ನನಗೆ ಹೇಳಿಕೊಟ್ಟರು” ಅಂತ ಹೇಳುತ್ತಾನೆ. ನಂಬಿಕೆ ಇದೆಯೆಂದು ಅಂದುಕೊಳ್ಳುವುದಕ್ಕೂ, ನಿಜವಾದ ನಂಬಿಕೆ ಇರುವುದಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ ಎಂದು ಇಂಥ ವ್ಯಕ್ತಿಗೆ ಅನಿಸಬಹುದು.
ಬೈಬಲ್ ಏನು ಹೇಳುತ್ತದೆ?
“ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.” (ಇಬ್ರಿಯ 11:1) ಒಬ್ಬನ ಭರವಸೆ ನಿಶ್ಚಿತವಾಗಿರಬೇಕಾದರೆ ತಾನು ನಂಬುವ ವಿಷಯಕ್ಕೆ ಬಲವಾದ ಕಾರಣಗಳಿರಬೇಕು. ನನ್ನ ಮನಸ್ಸಿಗೆ ಅದು ಸರಿ ಅನಿಸುತ್ತದೆ ಎಂದು ಹೇಳುವುದು ಸಾಕಾಗಲ್ಲ. ನಮ್ಮ ನಂಬಿಕೆಗೆ ಆಧಾರ ಏನು ಎಂದು ಹುಡುಕಬೇಕು.
“[ದೇವರ] ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.” —ರೋಮನ್ನರಿಗೆ 1:20.
ನಂಬಿಕೆ ಬೆಳೆಸಿಕೊಳ್ಳುವುದು ಮುಖ್ಯ ಯಾಕೆ?
ಬೈಬಲ್ ಏನು ಹೇಳುತ್ತದೆ?
“ನಂಬಿಕೆಯಿಲ್ಲದೆ [ದೇವರನ್ನು] ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.”—ಇಬ್ರಿಯ 11:6.
ಅನೇಕರು ಅಪ್ಪ-ಅಮ್ಮ ಹೇಳಿಕೊಟ್ಟರು ಎಂಬ ಕಾರಣಕ್ಕಾಗಿ ದೇವರನ್ನು ನಂಬುತ್ತಾರೆ. ‘ನನ್ನನ್ನು ಆ ರೀತಿ ಬೆಳೆಸಿದರು’ ಅಂತ ಅವರು ಹೇಳಬಹುದು. ಆದರೆ ತನ್ನ ಆರಾಧಕರು ತನ್ನನ್ನು ಕಣ್ಮುಚ್ಚಿ ನಂಬುವ ಬದಲು ದೇವರು ಇದ್ದಾನೆ ಮತ್ತು ನಮ್ಮನ್ನು ಪ್ರೀತಿಸುತ್ತಾನೆಂದು ಆಧಾರಗಳನ್ನು ನೋಡಿ ನಂಬಬೇಕು ಅಂತ ಆತನು ಬಯಸುತ್ತಾನೆ. ದೇವರನ್ನು ಶ್ರದ್ಧಾಪೂರ್ವಕವಾಗಿ ಹುಡುಕುವಂತೆ ನಮ್ಮನ್ನು ಬೈಬಲ್ ಉತ್ತೇಜಿಸುವ ಒಂದು ಕಾರಣ ಇದೇ ಆಗಿದೆ. ಹೀಗೆ ಮಾಡುವಾಗ ದೇವರ ಬಗ್ಗೆ ಚೆನ್ನಾಗಿ ತಿಳುಕೊಳ್ಳಬಹುದು.
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.
ನಂಬಿಕೆಯನ್ನು ಬೆಳೆಸಿಕೊಳ್ಳುವುದು ಹೇಗೆ?
ಬೈಬಲ್ ಏನು ಹೇಳುತ್ತದೆ?
“ಕೇಳಿಸಿಕೊಂಡ ವಿಷಯದಿಂದ ನಂಬಿಕೆಯು ಬರುತ್ತದೆ” ಎಂದು ಬೈಬಲ್ ಹೇಳುತ್ತದೆ. (ರೋಮನ್ನರಿಗೆ 10:17) ಹಾಗಾಗಿ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಇರುವ ಮೊದಲ ಹೆಜ್ಜೆ ಆತನ ಬಗ್ಗೆ ಬೈಬಲ್ ಹೇಳುವುದನ್ನು ‘ಕೇಳಿಸಿಕೊಳ್ಳುವುದೇ’ ಆಗಿದೆ. (2 ತಿಮೊಥೆಯ 3:16) ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಬೈಬಲ್ ಅಧ್ಯಯನ ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ದೇವರು ಯಾರು? ಆತನು ಇದ್ದಾನೆ ಅಂತ ನಂಬಲು ಯಾವ ಕಾರಣ ಇದೆ? ದೇವರಿಗೆ ನನ್ನ ಬಗ್ಗೆ ನಿಜವಾಗಿಯೂ ಚಿಂತೆ ಇದೆಯಾ? ಭವಿಷ್ಯಕ್ಕಾಗಿ ದೇವರ ಉದ್ದೇಶ ಏನು?
ಬೈಬಲನ್ನು ಹೇಗೆ ಅಧ್ಯಯನ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡಲು ಬಯಸುತ್ತಾರೆ. ನಮ್ಮ jw.org ವೆಬ್‌ಸೈಟಿನಲ್ಲಿ ತಿಳಿಸಿರುವಂತೆ, “ಬೈಬಲಿನ ಕುರಿತು ಜನರಿಗೆ ಕಲಿಸಲು ಯೆಹೋವನ ಸಾಕ್ಷಿಗಳಾದ ನಾವು ಹರ್ಷಿಸುತ್ತೇವೆ. ಆದರೆ ನಮ್ಮ ಧರ್ಮದ ಸದಸ್ಯರಾಗಬೇಕೆಂದು ಯಾರನ್ನೂ ಒತ್ತಾಯಿಸುವುದಿಲ್ಲ. ಬೈಬಲ್ ಏನು ಬೋಧಿಸುತ್ತದೆ ಎನ್ನುವುದನ್ನು ಜನರಿಗೆ ತಿಳಿಸುತ್ತೇವೆ. ಅದನ್ನು ನಂಬುವುದು ಇಲ್ಲವೆ ನಂಬದಿರುವುದು ಅವರಿಗೆ ಬಿಟ್ಟ ವಿಷಯವಾಗಿದೆ. ತನಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬರಿಗಿದೆ.”
ಆದ್ದರಿಂದ ನೀವು ಬೈಬಲಿನಲ್ಲಿ ಓದುವ ವಿಷಯಗಳು ಸತ್ಯವೋ ಅಲ್ಲವೋ ಎಂದು ತೂಗಿ ನೋಡಬೇಕು. ಆಮೇಲೆ ನಿಮಗೆ ಸಿಗುವ ಆಧಾರದ ಮೇಲೆ ನಿಮ್ಮ ನಂಬಿಕೆಯನ್ನು ಕಟ್ಟಬೇಕು. ಇದನ್ನು ಮಾಡುವ ಮೂಲಕ ನೀವು ಪ್ರಥಮ ಶತಮಾನದ ವಿದ್ಯಾರ್ಥಿಗಳನ್ನು ಅನುಕರಿಸುತ್ತೀರಿ. ಅವರು “ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.”—ಅಪೊಸ್ತಲರ ಕಾರ್ಯಗಳು 17:11. ◼ (g16-E No. 3)
“ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.