ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ
ಸಮಸ್ಯೆ
ಹತ್ತಿಪ್ಪತ್ತು ವರ್ಷಗಳ ಹಿಂದೆ, ಮಕ್ಕಳ ಹತ್ತಿರ ಲೈಂಗಿಕ ವಿಷಯಗಳ ಬಗ್ಗೆ ಹೆತ್ತವರೇ ಮೊದಲು ಮಾತಾಡುತ್ತಿದ್ದರು. ತಮ್ಮ ಮಕ್ಕಳ ವಯಸ್ಸು ಮತ್ತು ಅಗತ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಹೇಳುತ್ತಿದ್ದರು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. “ತುಂಬ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ ಮತ್ತು ಮಕ್ಕಳ ಪುಸ್ತಕ, ಕಾರ್ಯಕ್ರಮಗಳಲ್ಲೂ ಇಂಥ ವಿಷಯಗಳು ಹೆಚ್ಚಿವೆ” ಎಂದು ದ ಲೊಲಿಟಾ ಅಫೆಕ್ಟ್ ಎಂಬ ಪುಸ್ತಕ ತಿಳಿಸುತ್ತದೆ. ಈ ಬದಲಾದ ಪರಿಸ್ಥಿತಿಯಿಂದಾಗಿ ಮಕ್ಕಳಿಗೆ ಪ್ರಯೋಜನವಾಗುತ್ತಾ, ಹಾನಿಯಾಗುತ್ತಾ?
ನಿಮಗಿದು ತಿಳಿದಿರಲಿ
ಇಂಥ ವಿಷಯಗಳು ಎಲ್ಲೆಲ್ಲೂ ಲಭ್ಯ. “ಮಾತುಕತೆಗಳಲ್ಲಿ, ಜಾಹೀರಾತುಗಳಲ್ಲಿ, ಚಲನಚಿತ್ರ, ಪುಸ್ತಕ, ಗೀತೆ, ಟಿ.ವಿ., ಮೆಸೇಜ್, ಆಟ, ಪೋಸ್ಟರ್, ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಲೈಂಗಿಕ ಚಿತ್ರಗಳು, ಅಸಭ್ಯ ಭಾಷೆ ಹಾಗೂ ಹಾಸ್ಯಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ ಅನೇಕರು [ಹದಿವಯಸ್ಸಿನವರು, ಚಿಕ್ಕಮಕ್ಕಳು ಸಹ] ತಮಗೇ ಗೊತ್ತಿಲ್ಲದೆ ಲೈಂಗಿಕತೆ ಅನ್ನೋದು . . . ತುಂಬ ಪ್ರಾಮುಖ್ಯವಾದ ವಿಷಯ ಎಂಬ ತೀರ್ಮಾನಕ್ಕೆ ಬರುತ್ತಾರೆ” ಎಂದು ಡೆಬ್ರ ರೊಫ್ಮನ್ ಎಂಬಾಕೆ ತನ್ನ ಟಾಕ್ ಟು ಮಿ ಫಸ್ಟ್ ಎಂಬ ಪುಸ್ತಕದಲ್ಲಿ ತಿಳಿಸಿದ್ದಾಳೆ.
ವ್ಯಾಪಾರೋದ್ಯಮ ದಾರಿತಪ್ಪಿಸುತ್ತಿದೆ. ಜಾಹೀರಾತು ಕಂಪೆನಿಗಳು ಮತ್ತು ವ್ಯಾಪಾರಸ್ಥರು ಲೈಂಗಿಕತೆಗೆ ಪ್ರಚೋದಿಸುವಂಥ ಬಟ್ಟೆಗಳನ್ನು ಖರೀದಿಸುವಂತೆ ಮಕ್ಕಳನ್ನು ಉತ್ತೇಜಿಸುತ್ತಾರೆ. ಇದರಿಂದಾಗಿ ತಾವು ಹೇಗೆ ಕಾಣಿಸುತ್ತೇವೆಂಬುದರ ಬಗ್ಗೆ ಮಕ್ಕಳು ಚಿಕ್ಕ ಪ್ರಾಯದಲ್ಲೇ ಅತಿಯಾದ ಗಮನ ಕೊಡುತ್ತಾರೆ. “ಮಕ್ಕಳು ಸುಲಭವಾಗಿ ತಮ್ಮ ಬಲೆಗೆ ಬೀಳುತ್ತಾರೆ ಎಂದು ವ್ಯಾಪಾರೋದ್ಯಮಿಗಳಿಗೆ ಗೊತ್ತಿದೆ. ಆದ್ದರಿಂದ ಅವರನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ.” ಆದರೆ, “ಲೈಂಗಿಕತೆಗೆ ಪ್ರಚೋದಿಸುವಂಥ ಇಂಥ ಚಿತ್ರಗಳ ಅಥವಾ ಉತ್ಪನ್ನಗಳ ಉದ್ದೇಶ ಮಕ್ಕಳನ್ನು ಲೈಂಗಿಕತೆಗೆ ಉತ್ತೇಜಿಸುವುದಲ್ಲ ಬದಲಿಗೆ ವಸ್ತುಗಳನ್ನು ಖರೀದಿಸುವಂತೆ ಮಾಡುವುದೇ ಆಗಿದೆ” ಎಂದು ಸೋ ಸೆಕ್ಸೀ ಸೋ ಸೂನ್ ಎಂಬ ಪುಸ್ತಕ ತಿಳಿಸುತ್ತದೆ.
ಮಕ್ಕಳಿಗೆ ಸಂಪೂರ್ಣ ತಿಳಿವಳಿಕೆ ಇಲ್ಲ. ಕಾರು ಹೇಗೆ ಕೆಲಸಮಾಡುತ್ತೆ ಎಂದು ತಿಳಿದಿರೋದಕ್ಕೂ ಅದನ್ನು ಚೆನ್ನಾಗಿ ಓಡಿಸುವುದಕ್ಕೂ ತುಂಬ ವ್ಯತ್ಯಾಸ ಇದೆ. ಹಾಗೆಯೇ, ಲೈಂಗಿಕ ವಿಷಯಗಳ ಬಗ್ಗೆ ಗೊತ್ತಿರುವುದಕ್ಕೂ, ಅದರ ಬಗ್ಗೆ ಸರಿಯಾದ ನಿರ್ಣಯಗಳನ್ನು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ನೆನಪಿಡಿ: ‘ಗ್ರಹಣ ಶಕ್ತಿಯನ್ನು’ ತರಬೇತುಗೊಳಿಸಿಕೊಳ್ಳಲು ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹೀಗೆ ಮಾಡಿದರೆ ಅವರು ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸಬಲ್ಲರು.—ಇಬ್ರಿಯ 5:14.
ನೀವೇನು ಮಾಡಬಹುದು?
ಮಾತಾಡಿ. ನಿಮಗೆಷ್ಟೇ ಮುಜುಗರ ಅನಿಸಿದರೂ ನಿಮ್ಮ ಮಕ್ಕಳ ಜೊತೆ ಲೈಂಗಿಕ ವಿಷಯದ ಬಗ್ಗೆ ಮಾತಾಡಿ. ಯಾಕೆಂದರೆ ಅದು ನಿಮ್ಮ ಜವಾಬ್ದಾರಿ. ಇದರಿಂದ ಜಾರಿಕೊಳ್ಳಲು ಪ್ರಯತ್ನಿಸಬೇಡಿ.—ಬೈಬಲ್ ತತ್ವ: ಜ್ಞಾನೋಕ್ತಿ 22:6.
ಭಾಷಣ ಕೊಡಬೇಡಿ. ಲೈಂಗಿಕ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಕೊಡಬೇಡಿ. ನೀವಿಬ್ಬರೇ ಪ್ರಯಾಣಿಸುವಾಗ ಅಥವಾ ದಿನನಿತ್ಯದ ಕೆಲಸ ಮಾಡುವಾಗ ಮಾತಾಡಿ. ಮಕ್ಕಳು ಮನಸ್ಸು ಬಿಚ್ಚಿ ಮಾತಾಡಬೇಕೆಂದರೆ ನೀವು ಪ್ರಶ್ನೆಗಳನ್ನು ಕೇಳಬೇಕು. ಉದಾಹರಣೆಗೆ, ಅಸಹ್ಯ ಜಾಹೀರಾತುಗಳ ಬಗ್ಗೆ, “ನಿನಗೆ ಅಂಥ ಜಾಹೀರಾತುಗಳನ್ನು ನೋಡೋಕೆ ಇಷ್ಟ ಆಗುತ್ತಾ?” ಎಂದು ಕೇಳೋ ಬದಲು “ಕಂಪೆನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಇಂಥ ರೀತಿಯ ಜಾಹೀರಾತುಗಳನ್ನೇ ಯಾಕೆ ಕೊಡುತ್ತಾರೆ?” ಎಂದು ಕೇಳಿ. ಅವರು ಉತ್ತರಿಸಿದ ನಂತರ, “ನಿನಗೆ ಏನು ಅನಿಸುತ್ತೆ? ಅದು ಸರಿನಾ ತಪ್ಪಾ?” ಎಂದು ಕೇಳಿ.—ಬೈಬಲ್ ತತ್ವ: ಧರ್ಮೋಪದೇಶಕಾಂಡ 6:6, 7.
ವಯಸ್ಸಿಗೆ ತಕ್ಕಂತೆ ಹೇಳಿಕೊಡಿ. ಪುಟಾಣಿ ಮಕ್ಕಳಿಗೆ ಸಹ ಗುಪ್ತಾಂಗಗಳ ಹೆಸರುಗಳನ್ನು ಮತ್ತು ಲೈಂಗಿಕ ಕಿರುಕುಳ ಕೊಡುವವರಿಂದ ಹೇಗೆ ದೂರವಿರಬಹುದು ಎನ್ನುವುದನ್ನು ಹೇಳಿಕೊಡಿ. ಬೆಳೆಯುತ್ತಾ ಹೋದಂತೆ ಸಂತಾನೋತ್ಪತ್ತಿ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ಹೇಳಬಹುದು. ಹದಿವಯಸ್ಸಿಗೆ ಕಾಲಿಟ್ಟಾಗ ದೇಹದಲ್ಲಾಗುವ ಬದಲಾವಣೆ ಬಗ್ಗೆ ಮತ್ತು ನೈತಿಕತೆ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕು.
ನೈತಿಕ ಮೌಲ್ಯಗಳನ್ನು ಕಲಿಸಿ. ಮಕ್ಕಳಿಗೆ ಬಾಲ್ಯದಿಂದಲೇ ಪ್ರಾಮಾಣಿಕತೆ, ನಿಷ್ಠೆ ಮತ್ತು ಗೌರವದಂಥ ಗುಣಗಳನ್ನು ಬೆಳೆಸಿಕೊಳ್ಳಲು ಕಲಿಸಬೇಕು. ಆಗ ದೊಡ್ಡವರಾದ ಮೇಲೆ ಲೈಂಗಿಕತೆ ಬಗ್ಗೆ ಮಾತಾಡಲು ಸುಲಭವಾಗುತ್ತದೆ. ಯಾವುದು ತಪ್ಪು, ಯಾವುದು ಸರಿ ಎಂದು ಸ್ಪಷ್ಟವಾಗಿ ಹೇಳಿ, ಸುತ್ತಿಬಳಸಿ ಮಾತಾಡಬೇಡಿ. ಉದಾಹರಣೆಗೆ, ಮದುವೆಗೆ ಮುಂಚಿನ ಲೈಂಗಿಕ ಸಂಬಂಧದ ಬಗ್ಗೆ ಮಾತಾಡುವಾಗ ಅದು ತಪ್ಪೆಂದು ನೇರವಾಗಿ ಹೇಳಿ, ಅದು ಯಾಕೆ ತಪ್ಪು, ಅದ್ರಿಂದ ಯಾವ ಅಪಾಯಗಳಿವೆ ಎಂದು ತಿಳಿಸಿ. “ಹದಿವಯಸ್ಸಿನಲ್ಲಿ ಲೈಂಗಿಕ ಸಂಬಂಧದಲ್ಲಿ ಒಳಗೂಡುವವರನ್ನು ತಮ್ಮ ಹೆತ್ತವರು ಇಷ್ಟಪಡುವುದಿಲ್ಲ ಎಂದು ಗೊತ್ತಿರುವ ಹದಿವಯಸ್ಕರು ಸಾಮಾನ್ಯವಾಗಿ ಲೈಂಗಿಕತೆಯಲ್ಲಿ ಒಳಗೂಡುವುದಿಲ್ಲ” ಎಂದು ಬಿಯಾಂಡ್ ದ ಬಿಗ್ ಟಾಕ್ ಎಂಬ ಪುಸ್ತಕ ತಿಳಿಸುತ್ತದೆ.
ಮಾದರಿ ಇಡಿ: ನೀವು ಹೇಳುವುದೊಂದು ಮಾಡೋದೊಂದು ಮಾಡಬೇಡಿ. ಉದಾಹರಣೆಗೆ, ನೀವು ಕೆಟ್ಟ ಜೋಕ್‌ಗಳಿಗೆ ನಗುತ್ತೀರಾ? ಇತರರನ್ನು ಉದ್ರೇಕಿಸುವಂಥ ಬಟ್ಟೆ ಧರಿಸುತ್ತೀರಾ? ಚೆಲ್ಲಾಟವಾಡುತ್ತೀರಾ? ಹಾಗೆ ಮಾಡುವುದಾದರೆ, ನಿಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸಲು ನೀವೆಷ್ಟೇ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿರುವುದಿಲ್ಲ.—ಬೈಬಲ್ ತತ್ವ: ರೋಮನ್ನರಿಗೆ 2:21.
ಸರಿಯಾದ ದೃಷ್ಟಿಕೋನ ಬೆಳೆಸಿಕೊಳ್ಳಲು ನೆರವಾಗಿ. ಲೈಂಗಿಕತೆ ದೇವರಿಂದ ಬಂದ ಉಡುಗೊರೆ. ಮದುವೆ ಆದ ಮೇಲೆ ಇದನ್ನು ಅನುಭವಿಸಬಹುದು. (ಜ್ಞಾನೋಕ್ತಿ 5:18, 19) ‘ಆ ಸಮಯದವರೆಗೆ ಕಾದರೆ ಈ ಉಡುಗೊರೆಯಿಂದ ಸಂತೋಷಪಡೆಯಬಹುದು. ಹಾಗೆ ಮಾಡುವಾಗ ಮದುವೆಗಿಂತ ಮುಂಚೆ ಲೈಂಗಿಕತೆಯಲ್ಲಿ ಒಳಗೂಡುವುದರಿಂದ ಬರುವ ಚಿಂತೆ, ಬೇಸರ ಇರುವುದಿಲ್ಲ’ ಎಂದು ಮಕ್ಕಳಿಗೆ ತಿಳಿಸಿ.—1 ತಿಮೊಥೆಯ 1:18, 19. ◼ (g16-E No. 5)