ಯೆಹೋವನ ಸಾಕ್ಷಿಗಳೆಡೆಗೆ ನನ್ನನ್ನು ಸೆಳೆದ ಸಂಗತಿಗಳು
ಯೆಹೋವನ ಸಾಕ್ಷಿಗಳೆಡೆಗೆ ನನ್ನನ್ನು ಸೆಳೆದ ಸಂಗತಿಗಳು
ಟೊಮಾಸ್ ಒರಾಸ್ಕೊ ಹೇಳಿದಂತೆ
ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಗಳಿಗೆ ಪ್ರಥಮ ಬಾರಿ ಹಾಜರಾದಾಗ ಒಬ್ಬ ಪುಟ್ಟ ಪೋರ ಭಾಷಣ ನೀಡಿದ್ದ. ಭಾಷಣಕಾರನ ಸ್ಟ್ಯಾಂಡ್ ಅವನಿಗಿಂತ ಎತ್ತರವಾಗಿದ್ದರೂ ಅವನು ನಿರಾಳವಾಗಿ ಕೌಶಲದಿಂದ ಮಾತಾಡುತ್ತಿದ್ದದ್ದು ಅದ್ಭುತ. ಅದನ್ನು ನೋಡಿ ತಲೆದೂಗಿದೆ.
ಸಭಿಕರೆಲ್ಲರೂ ಮೈಯೆಲ್ಲಾ ಕಿವಿಯಾಗಿಸಿ ಕೇಳುತ್ತಿದ್ದರು. ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸಲ್ಪಟ್ಟ ಬೊಲಿವಿಯದ ಮಿಲಿಟರಿ ರಾಯಭಾರಿಯಾಗಿ, ಸೈನ್ಯದ ಕಮಾಂಡರ್ ಆಗಿ, ರಾಷ್ಟ್ರಾಧ್ಯಕ್ಷರೊಂದಿಗೆ ನಿಕಟವಾಗಿ ಕೆಲಸಮಾಡಿದ್ದ ನನಗೆ ಎಲ್ಲರೂ ಗೌರವಕೊಡುತ್ತಿದ್ದರು. ಆದರೆ ಈ ಪುಟ್ಟ ಪೋರನಿಗೆ ಸಿಕ್ಕಿದ ಗೌರವವು ನನ್ನ ಬಾಳಿನ ಗುರಿಗಳನ್ನು ಮರುಪರಿಶೀಲಿಸುವಂತೆ ಮಾಡಿತು.
1930ರ ದಶಕದ ಮಧ್ಯಭಾಗದಲ್ಲಿ ಪ್ಯಾರಗ್ವೈ ಮತ್ತು ಬೊಲಿವಿಯ ದೇಶಗಳ ನಡುವೆ ನಡೆದ ಚಾಕೊ ಯುದ್ಧದಲ್ಲಿ ನನ್ನ ತಂದೆ ತೀರಿಕೊಂಡರು. ಸ್ವಲ್ಪದರಲ್ಲೇ ನನ್ನನ್ನು ಕ್ಯಾಥೊಲಿಕ್ ಬೋರ್ಡಿಂಗ್ ಸ್ಕೂಲಿಗೆ ಸೇರಿಸಲಾಯಿತು. ಅಲ್ಲಿದ್ದಾಗ ನಾನು ಚರ್ಚಿನಲ್ಲಿ ನಡೆಯುವ ಮಾಸ್‌ಗೆ ದಿನಾಲೂ ಹೋಗುತ್ತಿದ್ದೆ, ಸ್ತುತಿಗೀತೆ ಹಾಡುತ್ತಿದ್ದೆ, ಕ್ಯಾಟಕಿಸಮ್‌ಗೆ ಹೋಗುತ್ತಿದ್ದೆ, ಬಾಯಿಪಾಠ ಮಾಡಿದ್ದ ಪ್ರಾರ್ಥನೆಗಳನ್ನು ಪದೇ ಪದೇ ಹೇಳುತ್ತಿದ್ದೆ. ಚರ್ಚ್‌ನಲ್ಲಿ ಮಾಸ್ ನಡೆಯುತ್ತಿದ್ದಾಗ ಪಾದ್ರಿಗೆ ಸಹಾಯಮಾಡುವ ‘ಆಲ್ಟರ್ ಬಾಯ್’ ಆಗಿದ್ದೆ ಮತ್ತು ಗಾಯಕವೃಂದದಲ್ಲೂ ಇದ್ದೆ. ಇದೆಲ್ಲವನ್ನು ಅನೇಕ ವರ್ಷಗಳ ವರೆಗೆ ಮಾಡಿದ್ದರೂ ನಾನೆಂದೂ ಬೈಬಲನ್ನು ಓದಿರಲಿಲ್ಲ, ನೋಡಿಯೂ ಇರಲಿಲ್ಲ.
ನನಗೆ ಧಾರ್ಮಿಕ ಹಬ್ಬಗಳೆಂದರೆ ತುಂಬ ಇಷ್ಟವಾಗುತ್ತಿತ್ತು ಏಕೆಂದರೆ ಅವು ಪಾರ್ಟಿಗಳ ಹಾಗಿದ್ದವು ಮತ್ತು ನಿತ್ಯದ ದಿನಚರಿಗಿಂತ ಭಿನ್ನವಾಗಿದ್ದವು. ಆದರೆ ಧರ್ಮಬೋಧನೆ ಮಾಡುತ್ತಿದ್ದ ಪಾದ್ರಿಗಳು ಮತ್ತು ಇನ್ನಿತರರು ಒರಟು ಸ್ವಭಾವದವರಾಗಿದ್ದರು. ಅವರೆಡೆಗೆ ಆಕರ್ಷಿತನಾಗುವ ಬದಲು ನನಗೆ ಅವರ ಬಗ್ಗೆ ಜಿಗುಪ್ಸೆ ಹುಟ್ಟಿತು. ನಾನು ಧರ್ಮದ ವಿಷಯದಲ್ಲಿ ಹೆಚ್ಚು ಒಳಗೂಡಬಾರದೆಂದು ನಿರ್ಧರಿಸಿದೆ.
ಮಿಲಿಟರಿ ಶಿಸ್ತು ನನ್ನನ್ನು ಸೆಳೆಯಿತು
ತುಂಬ ಬಿಸಿಲಿದ್ದ ಒಂದು ದಿನ ಠಾಕುಠೀಕಾಗಿದ್ದ ಇಬ್ಬರು ಮಿಲಿಟರಿ ಅಧಿಕಾರಿಗಳು ನನ್ನ ಹುಟ್ಟೂರಾದ ತಾರಿಹಕ್ಕೆ ಬಂದರು. ಅವರು ರಜೆಯ ಮೇಲೆ ಬೊಲಿವಿಯದ ಮುಖ್ಯ ನಗರವಾದ ಲಾ ಪಾಸ್‌ನಿಂದ ಬಂದಿದ್ದರು. ಪಟ್ಟಣದ ಮುಖ್ಯಚೌಕದ ಮಧ್ಯದಿಂದ ಹಾದುಹೋಗುತ್ತಿದ್ದ ಅವರ ನಡಿಗೆ ಗಾಂಭೀರ್ಯದಿಂದ ಕೂಡಿತ್ತು. ಅವರ ಸೊಗಸಾದ, ನೀಟಾದ, ಗೌರವಯುಕ್ತ ತೋರಿಕೆಯನ್ನು ಕಣ್ಣುಬಾಯಿ ಬಿಟ್ಟು ನೋಡುತ್ತಾ ನಿಂತೆ. ಅವರು ಹಸಿರು ಸಮವಸ್ತ್ರ ಮತ್ತು ಮಿನುಗುವ ಅಂಚಿದ್ದ ಟೋಪಿಯನ್ನು ಧರಿಸಿದ್ದರು. ನಾನೊಬ್ಬ ಮಿಲಿಟರಿ ಅಧಿಕಾರಿಯಾಗಬೇಕೆಂದು ಆ ಕ್ಷಣವೇ ನಿರ್ಧರಿಸಿಬಿಟ್ಟೆ. ಮಿಲಿಟರಿಯಲ್ಲಿರುವವರ ಜೀವನ ಸಾಹಸಕಾರ್ಯಗಳ ಅನುಭವಗಳಿಂದಲೂ ಸನ್ಮಾನಯೋಗ್ಯ ಕೆಲಸಗಳಿಂದಲೂ ತುಂಬಿರಬಹುದು ಎಂದು ನೆನಸಿದೆ.
ನಾನು 16 ವರ್ಷದವನಾಗಿದ್ದಾಗ 1949ರಲ್ಲಿ ಬೊಲಿವಿಯದ ಮಿಲಿಟರಿ ಕಾಲೇಜಿನಲ್ಲಿ ನನ್ನನ್ನು ತಕ್ಕೊಳ್ಳಲಾಯಿತು. ಸೈನಿಕರು ಉಳುಕೊಳ್ಳುತ್ತಿದ್ದ ಕಟ್ಟಡದ ಗೇಟಿನ ವರೆಗೆ ಯುವಕರ ಒಂದು
ಉದ್ದ ಸಾಲಿತ್ತು. ಆ ಸಾಲಿಗೆ ಸೇರಿದ್ದ ನನ್ನೊಟ್ಟಿಗೆ ಅಣ್ಣನೂ ಇದ್ದ. ಅವನು ಅಲ್ಲಿದ್ದ ಲೆಫ್ಟೆನಂಟ್‌ಗೆ ನನ್ನನ್ನು ಪರಿಚಯಿಸಿ ಚೆನ್ನಾಗಿ ನೋಡಿಕೊಳ್ಳುವಂತೆ ವಿನಂತಿಸಿದ. ಮಾತ್ರವಲ್ಲ ನನ್ನ ಬಗ್ಗೆ ಒಂದೆರಡು ಒಳ್ಳೇ ಮಾತುಗಳನ್ನೂ ಆಡಿದ. ಅವನು ಹೋದ ಬಳಿಕ ನನಗೆ ಹೊಸದಾಗಿ ಮಿಲಿಟರಿ ಸೇರುವವರಿಗೆ ಸಿಗುವ ಸಾಂಪ್ರದಾಯಿಕ ಸ್ವಾಗತ ಸಿಕ್ಕಿತು. ಅಂದರೆ ಲೆಫ್ಟೆನಂಟ್ ನನಗೊಂದು ಗುದ್ದು ಕೊಟ್ಟು ನೆಲಕ್ಕುರುಳಿಸಿ “ಇಲ್ಲಿ ಯಾರ ಶಿಫಾರಸ್ಸೂ ನಡೆಯುವುದಿಲ್ಲ” ಎಂದರು. ನನಗೆ ಮಿಲಿಟರಿಯ ಶಿಸ್ತು ಮತ್ತು ದಬ್ಬಾಳಿಕೆಯ ಮೊದಲ ರುಚಿ ಸಿಕ್ಕಿದ್ದು ಹೀಗೆ! ಆದರೂ ಎಲ್ಲವನ್ನು ಸಹಿಸಿಕೊಂಡೆ. ನನ್ನ ಆತ್ಮಾಭಿಮಾನಕ್ಕೆ ಸ್ವಲ್ಪ ಪೆಟ್ಟುಬಿತ್ತಷ್ಟೆ.ಸಮಯ ದಾಟಿದಂತೆ, ಯುದ್ಧಮಾಡುವುದು ಹೇಗೆಂದು ಕಲಿತೆ. ಮುಂದೆ ಒಬ್ಬ ಗಣ್ಯ ಮಿಲಿಟರಿ ಅಧಿಕಾರಿಯಾದೆ. ಆದರೆ ಅನುಭವದಿಂದ ನಾನು ಕಲಿತ ಸಂಗತಿಯೇನಂದರೆ ಮಿಲಿಟರಿ ಸಿಬ್ಬಂದಿಯವರ ನೀಟಾದ, ಗೌರವಾನ್ವಿತ ತೋರಿಕೆಯು ಬರೇ ಒಂದು ಸೋಗು ಆಗಿರಬಲ್ಲದು.
ವಿಶಿಷ್ಟ ಹುದ್ದೆಯನ್ನು ಸಂಪಾದಿಸಿದ ಸಾಧನೆ
ನನ್ನ ವೃತ್ತಿ ಜೀವನವನ್ನು ಆರಂಭಿಸಿದಾಗ ಕೆನರಲ್ ಬೆಲ್‌ಗ್ರಾನೋ ಎಂಬ ಅರ್ಜೆಂಟೀನದ ಯುದ್ಧನೌಕೆಯಲ್ಲಿ ತರಬೇತಿ ಸಿಕ್ಕಿತು. ಆ ನೌಕೆ ಸಾವಿರಕ್ಕಿಂತಲೂ ಹೆಚ್ಚು ಸೈನಿಕರನ್ನು ಹೊತ್ತು ಸಾಗುವಷ್ಟು ದೊಡ್ಡದಾಗಿತ್ತು. ಅದನ್ನು IIನೇ ಲೋಕ ಯುದ್ಧದ ಮುಂಚೆ ‘ಯುಎಸ್‌ಎಸ್ ಫೀನಿಕ್ಸ್’ ಎಂಬ ಹೆಸರಿನಲ್ಲಿ ಪ್ರಥಮ ಬಾರಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಸಲಾಗಿತ್ತು. 1941ರಲ್ಲಿ ಹವಾಯೀಯ ಪರ್ಲ್ ಹಾರ್ಬರ್‌ನ ಮೇಲೆ ಜಪಾನೀಯರು ದಾಳಿಮಾಡಿದಾಗ ಅದಕ್ಕೇನೂ ಹಾನಿಯಾಗದೆ ಬಚಾವಾಗಿತ್ತು.
ನಿಧಾನವಾಗಿ ನಾನು ಒಂದೊಂದೇ ದರ್ಜೆ ಮೇಲೇರಿದೆ. ಬೊಲಿವಿಯದ ಇಡೀ ನೌಕಾಪಡೆಗೆ ದ್ವಿತೀಯಾಧಿಕಾರಿಯಾದೆ. ಆ ಪಡೆಯು ಬೊಲಿವಿಯದ ಸೀಮಾರೇಖೆಯಾಗಿರುವ ಎಲ್ಲ ಜಲಮಾರ್ಗಗಳನ್ನು ಗಸ್ತುತಿರುಗುತ್ತಿತ್ತು. ಇವುಗಳಲ್ಲಿ ಅಮೆಜಾನ್ ಜಲಾನಯನ ಪ್ರದೇಶದಲ್ಲಿದ್ದ ನದಿಗಳು ಮತ್ತು ಜಗತ್ತಿನ ನೌಕಾಸಂಚಾರಯೋಗ್ಯ ಸರೋವರಗಳಲ್ಲಿ ಒಂದಾದ ಟಿಟಿಕಾಕ ಸೇರಿತ್ತು.
ಈ ಮಧ್ಯೆ 1980ರ ಮೇ ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನ ರಾಜಧಾನಿಯಾದ ವಾಷಿಂಗ್ಟನ್ ಡಿ. ಸಿ.ಗೆ ಇತರ ಮಿಲಿಟರಿ ರಾಯಭಾರಿಗಳೊಂದಿಗೆ ನನ್ನನ್ನೂ ಕಳುಹಿಸಲಾಯಿತು. ಅವರು ಭೂಸೇನೆ, ವಾಯುಸೇನೆ, ನೌಕಾಸೇನೆಯ ಉನ್ನತ ದರ್ಜೆಯ ಅಧಿಕಾರಿಗಳಾಗಿದ್ದರು. ನಾನು ಅವರೆಲ್ಲರಿಗಿಂತ ಸೀನಿಯರ್ ಆಗಿದ್ದರಿಂದ ನನ್ನನ್ನು ಅವರ ಮೇಲಿನ ಅಧಿಕಾರಿಯನ್ನಾಗಿ ಮಾಡಲಾಯಿತು. ಸುಮಾರು ಎರಡು ವರ್ಷಗಳ ವರೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದೆ. ಬಳಿಕ ಬೊಲಿವಿಯದ ರಾಷ್ಟ್ರಾಧ್ಯಕ್ಷರೊಂದಿಗೆ ನಿಕಟವಾಗಿ ಕೆಲಸಮಾಡಿದೆ.
ನಾನು ಮಿಲಿಟರಿ ಕಮಾಂಡರ್ ಆಗಿದ್ದರಿಂದ ಪ್ರತಿ ಭಾನುವಾರ ಚರ್ಚಿಗೆ ಹೋಗಬೇಕಾಗಿತ್ತು. ಸೈನ್ಯದ ಪಾದ್ರಿ ಮತ್ತು ಇತರ ಪಾದ್ರಿಗಳು ಕ್ರಾಂತಿಗಳಲ್ಲಿ, ಯುದ್ಧಗಳಲ್ಲಿ ಒಳಗೂಡುತ್ತಿದ್ದದ್ದನ್ನು ನೋಡಿ ನನಗೆ ಧರ್ಮದ ಬಗ್ಗೆ ನಿರಾಶೆ ಹುಟ್ಟಿತು. ಅಂಥ ರಕ್ತಪಾತಗಳನ್ನು ಚರ್ಚು ಬೆಂಬಲಿಸುವುದು ತಪ್ಪು ಎಂದು ನನಗೆ ಗೊತ್ತಿತ್ತು. ಆದರೆ ಪಾದ್ರಿಗಳ ಕಪಟತನವು ನಾನು ಧರ್ಮವನ್ನೇ ಬಿಟ್ಟುಬಿಡುವಂತೆ ಮಾಡುವ ಬದಲು ಆಧ್ಯಾತ್ಮಿಕ ಸತ್ಯವನ್ನು ಹುಡುಕುವಂತೆ ಮಾಡಿತು. ಹಿಂದೆಂದೂ ನಾನು ಬೈಬಲನ್ನು ಓದಿರಲಿಲ್ಲ. ಆದರೆ ಈಗ ಅದನ್ನು ಆಗಿಂದಾಗ್ಗೆ ತೆಗೆದು, ತೆರೆದಾಕ್ಷಣ ಸಿಗುವ ಭಾಗಗಳನ್ನು ಓದಲಾರಂಭಿಸಿದೆ.
ರಾಜ್ಯ ಸಭಾಗೃಹದಲ್ಲಿ ಕಂಡ ಶಿಸ್ತು
ನನ್ನ ಪತ್ನಿ ಮಾನ್ಯುವೆಲಾ ಯೆಹೋವನ ಸಾಕ್ಷಿಗಳಿಂದ ಬೈಬಲ್ ಅಧ್ಯಯನ ಪಡೆಯಲಾರಂಭಿಸಿದಾಗ ನನಗೆ ಆಶ್ಚರ್ಯವಾಯಿತು. ಜಾನೆಟ್ ಎಂಬ ಮಿಷನೆರಿ ಆಕೆಗೆ ಬೈಬಲನ್ನು ಕಲಿಸುತ್ತಿದ್ದರು. ಬಳಿಕ ಮಾನ್ಯುವೆಲಾ ಆ ಸಾಕ್ಷಿಗಳ ಆರಾಧನಾ ಸ್ಥಳವಾದ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೂ ಹಾಜರಾಗಲು ಆರಂಭಿಸಿದಳು. ಅಲ್ಲಿಗೆ ಅವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ನನಗೇನು ಅಭ್ಯಂತರವಿರಲಿಲ್ಲ, ಆದರೆ ಕೂಟಗಳಿಗೆ ಹಾಜರಾಗಲು ಮಾತ್ರ ನನಗಿಷ್ಟವಿರಲಿಲ್ಲ. ಅಲ್ಲಿ ಬರೇ ಸದ್ದುಗದ್ದಲ, ಅಳುಬೊಬ್ಬೆಗಳೇ ಇರಬಹುದೆಂದು ನಾನು ನೆನಸಿದ್ದೆ.
ಜಾನೆಟ್‌ರವರ ಪತಿ ನನ್ನನ್ನು ಭೇಟಿಯಾಗಬಹುದೋ ಎಂದು ಮಾನ್ಯುವೆಲಾ ಒಂದು ದಿನ ನನ್ನನ್ನು ಕೇಳಿದಳು. ಮೊದಲು ನಾನು ಬೇಡವೆಂದೆ. ಆದರೆ ನಂತರ, ನನಗಿದ್ದ ಧಾರ್ಮಿಕ ತರಬೇತಿಯಿಂದ ಅವರ ಹೇಳುವ ವಿಷಯಗಳನ್ನು ತಪ್ಪೆಂದು ಸಾಬೀತು ಪಡಿಸಬಲ್ಲೆ ಎಂದು ನೆನಸಿ ಒಪ್ಪಿಕೊಂಡೆ. ಜಾನೆಟ್‌ರ ಪತಿ ಇಆ್ಯನ್ ಮೊದಲ ಬಾರಿ ಭೇಟಿಯಾದಾಗ ಅವರ ಮಾತಿಗಿಂತಲೂ ಅವರ ನಡವಳಿಕೆ ನನಗೆ ತುಂಬ ಹಿಡಿಸಿತು. ಅವರು ತಮ್ಮ ಬೈಬಲ್ ಜ್ಞಾನ, ತರಬೇತಿಯಿಂದ ನನ್ನನ್ನು ಪೇಚಾಟಕ್ಕೀಡು ಮಾಡಲಿಲ್ಲ. ನನ್ನೊಟ್ಟಿಗೆ ತುಂಬ ದಯೆಯಿಂದ ಗೌರವದಿಂದ ನಡೆದುಕೊಂಡರು.
ಮುಂದಿನ ವಾರವೇ ನಾನು ರಾಜ್ಯ ಸಭಾಗೃಹಕ್ಕೆ ಹೋದೆ. ಅಲ್ಲಿ ಪುಟ್ಟ ಪೋರನೊಬ್ಬನು ಒಂದು ಭಾಷಣ ಕೊಟ್ಟನು. ಲೇಖನದ ಆರಂಭದಲ್ಲಿ ನಾನು ಹೇಳಿದ್ದು ಇದರ ಬಗ್ಗೆಯೇ. ಆ ಹುಡುಗ ಬೈಬಲಿನ ಯೆಶಾಯ ಪುಸ್ತಕದಿಂದ ವಚನಗಳನ್ನು ಓದಿ ವಿವರಿಸುತ್ತಿರುವುದನ್ನು ಕೇಳುತ್ತಿದ್ದಂತೆ, ಒಂದು ಅಪೂರ್ವ ಸಂಘಟನೆಯನ್ನು ಕಂಡುಕೊಂಡಿದ್ದೇನೆಂದು ನನಗರಿವಾಯಿತು. ಚಿಕ್ಕವನಿದ್ದಾಗ ಒಬ್ಬ ಗಣ್ಯ ಮಿಲಿಟರಿ ಅಧಿಕಾರಿಯಾಗಬೇಕೆಂದು ಆಶಿಸಿದ ನನ್ನಲ್ಲಿ ಈಗ ಆ ಪುಟ್ಟ ಹುಡುಗನಂತೆ ಬೈಬಲ್ ಉಪದೇಶ ಮಾಡುವವನಾಗಬೇಕೆಂಬ ಆಸೆ ಮೊಳೆಯಿತು. ಎಂಥ ವಿಪರ್ಯಾಸವಲ್ಲವೇ? ಇದ್ದಕ್ಕಿದ್ದ ಹಾಗೆ ನನ್ನ ಮನಸ್ಸು ಮೃದುವಾದಂತಿತ್ತು. ನಾನು ಇನ್ನಷ್ಟು ವಿಷಯಗಳನ್ನು ಕಲಿಯಬಯಸಿದೆ.
ಕಾಲ ದಾಟಿದಂತೆ, ಯೆಹೋವನ ಸಾಕ್ಷಿಗಳ ಸಮಯಪಾಲನೆ ಮತ್ತು ಅವರು ನನ್ನನ್ನು ಹಾರ್ದಿಕವಾಗಿ ವಂದಿಸುತ್ತಿದ್ದ ರೀತಿಯಿಂದಲೂ ಪ್ರಭಾವಿತನಾದೆ. ರಾಜ್ಯ ಸಭಾಗೃಹಕ್ಕೆ ಹೋದಾಗ ಅಲ್ಲಿರುವವರು ನನ್ನನ್ನು ಅಪರಿಚಿತನಂತೆ ಕಾಣುತ್ತಿರಲಿಲ್ಲ. ಅವರ ಸ್ವಚ್ಛ, ನೀಟಾದ ಉಡುಗೆತೊಡುಗೆಯೂ ನನ್ನನ್ನು ಆಕರ್ಷಿಸಿತು. ಇನ್ನೂ ಹೆಚ್ಚಾಗಿ ನನ್ನನ್ನು ಸೆಳೆದ ಸಂಗತಿಯೇನೆಂದರೆ ಅವರ ಕೂಟಗಳು ಶಿಸ್ತಿನಿಂದ ನಡೆಯುತ್ತಿದ್ದವು. ನಿರ್ದಿಷ್ಟ ದಿನದಂದು ಯಾವ ಭಾಷಣವನ್ನು ಮೊದಲೇ ನಿಗದಿಪಡಿಸಲಾಗುತ್ತಿತ್ತೋ ಅದೇ ಭಾಷಣವನ್ನು ಅಂದು ನೀಡಲಾಗುತ್ತಿತ್ತು. ಈ ಶಿಸ್ತು ಪ್ರೀತಿಯ ಮೇಲೆ ಆಧರಿತವಾಗಿತ್ತೇ ಹೊರತು ದಬ್ಬಾಳಿಕೆಯ ಮೇಲಲ್ಲ ಎಂದು ಗ್ರಹಿಸಿದೆ.
ಮೊದಲ ಬಾರಿ ಕೂಟಕ್ಕೆ ಹಾಜರಾದ ನಂತರ ಬೈಬಲ್ ಅಧ್ಯಯನ ಮಾಡಲು ನಾನು ಒಪ್ಪಿದೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ * ಎಂಬ ಪುಸ್ತಕವನ್ನು ಇಆ್ಯನ್ ನನ್ನೊಂದಿಗೆ ಅಧ್ಯಯನ ಮಾಡಿದರು. ಅದರ ಮೂರನೇ ಅಧ್ಯಾಯದಲ್ಲಿ ಒಬ್ಬ ಬಿಷಪ್ ಯುದ್ಧಕ್ಕೆ ಮುಂಚೆ ಸೈನ್ಯವನ್ನು ಆಶೀರ್ವದಿಸುವ ಚಿತ್ರ ನನಗಿನ್ನೂ ನೆನಪಿದೆ. ಹೀಗಾಗುವುದನ್ನು ನಾನು ಕಣ್ಣಾರೆ ನೋಡಿರುವುದರಿಂದ ಆ ಚಿತ್ರ ನೂರಕ್ಕೆ ನೂರು ಸತ್ಯ ಎಂದು ನನಗೆ ಗೊತ್ತಿತ್ತು. ರಾಜ್ಯ ಸಭಾಗೃಹದಲ್ಲಿ ಶಾಸ್ತ್ರಗ್ರಂಥದಿಂದ ತರ್ಕಿಸುವುದು (ಇಂಗ್ಲಿಷ್) ಎಂಬ ಪುಸ್ತಕವನ್ನು ಪಡೆದುಕೊಂಡೆ. ಅದರಲ್ಲಿ ರಾಜಕೀಯ ವಿಷಯದಲ್ಲಿ ತಟಸ್ಥರಾಗಿರುವುದರ ಕುರಿತು ಬೈಬಲ್ ಏನನ್ನುತ್ತದೋ ಅದನ್ನು ಓದಿದಾಗ ನಾನು ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಅರ್ಥವಾಯಿತು. ಕ್ಯಾಥೊಲಿಕ್ ಚರ್ಚಿಗೆ ಇನ್ನೆಂದೂ ಕಾಲಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಕ್ರಮವಾಗಿ ಹಾಜರಾಗಲಾರಂಭಿಸಿದೆ. ಮಿಲಿಟರಿಯಿಂದ ನಿವೃತ್ತನಾಗಲೂ ಯೋಜನೆಗಳನ್ನು ಮಾಡಿದೆ.
ದೀಕ್ಷಾಸ್ನಾನದತ್ತ ಹೆಜ್ಜೆ
ಕೆಲವು ವಾರಗಳ ನಂತರ, ಮುಂಬರುವ ಅಧಿವೇಶನಕ್ಕಾಗಿ ಬಳಸಲಾಗುವ ಸ್ಟೇಡಿಯಂ ಅನ್ನು ಸಭೆಯವರು ಶುಚಿಗೊಳಿಸಲಿದ್ದಾರೆಂದು ನನಗೆ ತಿಳಿಯಿತು. ಆ ಅಧಿವೇಶನಕ್ಕೆ ಹಾಜರಾಗಲು ಉತ್ಸುಕನಾಗಿದ್ದ ನಾನು ಆ ಕೆಲಸಕ್ಕಾಗಿ ಸಭೆಯವರನ್ನು ಜೊತೆಗೂಡಿದೆ. ಅವರೊಂದಿಗೆ ಕೆಲಸಮಾಡುತ್ತಾ ಅವರ ಒಡನಾಟದಲ್ಲಿ ಆನಂದಿಸಿದೆ. ನಾನು ಗುಡಿಸುತ್ತಿರುವಾಗ ಒಬ್ಬ ವ್ಯಕ್ತಿ ಬಂದು ‘ನೀವು ನೌಕಾಸೇನೆಯ ಆ ಪ್ರಧಾನ ಅಧಿಕಾರಿ ತಾನೇ’ ಎಂದು ಕೇಳಿದ.
“ಹೌದು” ಎಂದುತ್ತರಿಸಿದೆ.
“ನನ್ನ ಕಣ್ಣನ್ನೇ ನಂಬಲಿಕ್ಕಾಗುತ್ತಿಲ್ಲ. ಇಷ್ಟು ದೊಡ್ಡ ಅಧಿಕಾರಿ ನೆಲಗುಡಿಸುವುದೇ” ಎಂದು ಅಚ್ಚರಿಯಿಂದ ಕೂಗಿ ಹೇಳಿದ. ಅತ್ಯುನ್ನತ ದರ್ಜೆಯಲ್ಲಿದ್ದ ಒಬ್ಬ ಅಧಿಕಾರಿ ನೆಲಗುಡಿಸುವುದಂತೂ ಬಿಡಿ ಕೆಳಗೆ ಬಿದ್ದ ಒಂದು ಕಾಗದದ ಚೂರನ್ನು ಹೆಕ್ಕಿತೆಗೆಯುವ ದೃಶ್ಯ ನೋಡಲೂ ಸಿಗುತ್ತಿರಲಿಲ್ಲ. ಆ ವ್ಯಕ್ತಿ ಮಿಲಿಟರಿಯಲ್ಲಿ ನನ್ನ ವಾಹನ ಚಾಲಕನಾಗಿದ್ದ. ಈಗ ಅವನೂ ಯೆಹೋವನ ಸಾಕ್ಷಿಯಾಗಿದ್ದ!
ಸಹಕಾರಕ್ಕೆ ಪ್ರೀತಿಯೇ ಕಾರಣ
ಮಿಲಿಟರಿಯಲ್ಲಿ ಹುದ್ದೆಗನುಸಾರ ಗೌರವ ಕೊಡಲಾಗುತ್ತಿತ್ತು. ಈ ವಿಚಾರವೇ ನನ್ನ ಕಣಕಣದಲ್ಲೂ ಸೇರಿಕೊಂಡು ಬಿಟ್ಟಿತ್ತು. ಉದಾಹರಣೆಗೆ ಯೆಹೋವನ ಸಾಕ್ಷಿಗಳಲ್ಲೂ ಕೆಲವರಿಗಿರುವ ಜವಾಬ್ದಾರಿ ಮತ್ತು ಕೆಲಸದಿಂದಾಗಿ ಅವರನ್ನು ಉಳಿದವರಿಗಿಂತ ಶ್ರೇಷ್ಠರೆಂದೆಣಿಸಿ ವಿಶೇಷ ಸನ್ಮಾನಕೊಡಲಾಗುತ್ತದೊ ಎಂದು ನಾನು ಕೇಳುತ್ತಿದ್ದದ್ದು ನೆನಪಿದೆ. ದರ್ಜೆ ಮತ್ತು ಹುದ್ದೆಯ ಬಗ್ಗೆ ನನಗಿದ್ದ ಅಭಿಪ್ರಾಯವು ಆಗಲೂ ಭದ್ರವಾಗಿ ಬೇರೂರಿತ್ತು. ಆದರೆ ಅದು ಬೇಗನೆ ಪೂರ್ತಿಯಾಗಿ ಬದಲಾಗಲಿತ್ತು.
ಆ ಸಮಯದಲ್ಲೇ ಅಂದರೆ 1989ರಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರೊಬ್ಬರು ನ್ಯೂ ಯಾರ್ಕ್‌ನಿಂದ ಬೊಲಿವಿಯಕ್ಕೆ ಬರಲಿದ್ದಾರೆಂದೂ ಸ್ಟೇಡಿಯಂನಲ್ಲಿ ಭಾಷಣ ಕೊಡಲಿದ್ದಾರೆಂದೂ ನನಗೆ ಗೊತ್ತಾಯಿತು. ಸಂಘಟನೆಯ ಗಣ್ಯವ್ಯಕ್ತಿಯೆಂದು ನಾನೆಣಿಸಿದ್ದ ಇವರನ್ನು ಹೇಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ನೋಡಲು ತುದಿಗಾಲಲ್ಲಿ ನಿಂತಿದ್ದೆ. ಇಷ್ಟೊಂದು ಜವಾಬ್ದಾರಿಗಳಿರುವ ವ್ಯಕ್ತಿಗೆ ಖಂಡಿತವಾಗಿ ವಿಶೇಷ ಸಮ್ಮಾನ ಸತ್ಕಾರಗಳಿರುವವು ಎಂದು ನೆನಸಿದ್ದೆ.
ಕೂಟ ಆರಂಭವಾದರೂ ಯಾರೋ ವಿಶೇಷ ವ್ಯಕ್ತಿಯೊಬ್ಬರು ಬಂದ ಹಾಗೆ ಕಾಣುತ್ತಿರಲಿಲ್ಲ. ಏನಾಗಿರಬೇಕು ಎಂದು ಯೋಚಿಸುತ್ತಾ ಇದ್ದೆ. ನನ್ನ ಮತ್ತು ಮಾನ್ಯುವೆಲಾ ಪಕ್ಕದಲ್ಲೇ ಒಂದು ವೃದ್ಧ ದಂಪತಿ ಕುಳಿತಿದ್ದರು. ಆ ವೃದ್ಧೆಯ ಕೈಯಲ್ಲಿ ಇಂಗ್ಲಿಷ್ ಗೀತೆಪುಸ್ತಕ ಇದ್ದದ್ದನ್ನು ಮಾನ್ಯುವೆಲಾ ನೋಡಿದಳು. ಆದ್ದರಿಂದ ವಿರಾಮದ ಸಮಯದಲ್ಲಿ ಅವರನ್ನು ಮಾತಾಡಿಸಿದಳು. ಬಳಿಕ ಆ ದಂಪತಿ ಅಲ್ಲಿಂದ ಎದ್ದುಹೋದರು.
ಸ್ವಲ್ಪ ಸಮಯದ ನಂತರ ಆ ವೃದ್ಧೆಯ ಪತಿ ಮುಖ್ಯ ಭಾಷಣ ಕೊಡಲು ವೇದಿಕೆಗೆ ಹೋಗುವುದನ್ನು ನೋಡಿ ನಾವು ದಂಗಾಗಿಬಿಟ್ಟೆವು! ನಾನು ಮಿಲಿಟರಿಯಲ್ಲಿ ದರ್ಜೆ, ಗೌರವ, ಅಧಿಕಾರ, ಪದವಿ ಇವೆಲ್ಲದರ ಬಗ್ಗೆ ಕಲಿತದ್ದೆಲ್ಲವೂ ಆ ಕ್ಷಣದಲ್ಲೇ ಕರಗಿಹೋಯಿತು. “ಕುಳಿತುಕೊಳ್ಳಲು ಕಷ್ಟವಾಗುತ್ತಿದ್ದ ಆ ಆಸನಗಳಲ್ಲಿ ನಮ್ಮಂತೆಯೇ ಆಡಳಿತ ಮಂಡಲಿಯ ಸದಸ್ಯರೊಬ್ಬರು ಕುಳಿತಿದ್ದರೆಂದು ನನಗೆ ನಂಬಲಿಕ್ಕಾಗುವುದಿಲ್ಲ!” ಎಂದು ನಾನು ಆಮೇಲೆ ಹೇಳಿದೆ.
“ನೀವೆಲ್ಲರೂ ಸಹೋದರರು” ಎಂದು ಮತ್ತಾಯ 23:8ರಲ್ಲಿ ಯೇಸು ಹೇಳಿದ ಮಾತನ್ನು ನನಗೆ ಅರ್ಥಮಾಡಿಸಲು ಇಆ್ಯನ್ ಎಷ್ಟೋ ಸಲ ಪ್ರಯತ್ನಿಸಿದ್ದರು. ಅದನ್ನೆಲ್ಲ ಯೋಚಿಸಿದರೆ ನನಗೀಗ ನಗುಬರುತ್ತೆ.
ಪ್ರಥಮ ಬಾರಿ ಸಾರಲು ಹೋದದ್ದು
ನಾನು ಮಿಲಿಟರಿ ಕೆಲಸದಿಂದ ನಿವೃತ್ತನಾದ ಬಳಿಕ ಇಆ್ಯನ್ ನನ್ನನ್ನು ಮನೆಯಿಂದ ಮನೆಗೆ ಸಾರುವ ಕೆಲಸಕ್ಕೆ ಕರೆದರು. (ಅ. ಕಾರ್ಯಗಳು 20:20) ನಾನು ಎಲ್ಲಿ ಹೋಗಬಾರದೆಂದು ಅಂದುಕೊಂಡಿದ್ದೆನೋ ಅಲ್ಲಿಗೇ ಅಂದರೆ ಮಿಲಿಟರಿ ಜನರ ಮನೆಗಳಿರುವ ಕ್ಷೇತ್ರದಲ್ಲೇ ಸೇವೆಮಾಡಬೇಕಾಗಿ ಬಂತು. ಮೊದಲ ಮನೆಯಲ್ಲಿ, ಯಾರ ಕಣ್ಣಿಗೆ ಬೀಳಬಾರದೆಂದು ಎಣಿಸಿದ್ದೆನೋ ಆ ಜನರಲ್ ಸಾಹೇಬರೇ ಬಾಗಿಲು ತೆರೆದು ಹೊರಗೆ ಬಂದರು. ಅವರು ನನ್ನ ಬ್ರೀಫ್‌ಕೇಸ್ ಮತ್ತು ಬೈಬಲನ್ನು ನೋಡಿ ತಿರಸ್ಕಾರದಿಂದ “ಇದೇನಯ್ಯಾ?” ಎಂದಾಗ ನನಗೆ ತುಂಬ ಗಾಬರಿ, ಹೆದರಿಕೆಯಾಯಿತು.
ತಕ್ಷಣ ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಒಂದು ರೀತಿಯ ಭರವಸೆ ಮತ್ತು ಪ್ರಶಾಂತತೆ ನನ್ನನ್ನು ಆವರಿಸಿತು. ಆ ಜನರಲ್ ನಾನು ಹೇಳುತ್ತಿದ್ದ ವಿಷಯವನ್ನು ಆಲಿಸಿ ಬೈಬಲ್ ಸಾಹಿತ್ಯವನ್ನೂ ಸ್ವೀಕರಿಸಿದರು. ಈ ಅನುಭವವು ನಾನು ಯೆಹೋವನಿಗೆ ನನ್ನ ಜೀವನವನ್ನು ಸಮರ್ಪಿಸಿಕೊಳ್ಳುವಂತೆ ಪ್ರೋತ್ಸಾಹಿಸಿತು. ನನ್ನ ಆ ಸಮರ್ಪಣೆಯ ಸಂಕೇತವಾಗಿ 1990ರ ಜನವರಿ 3ರಂದು ನೀರಿನ ದೀಕ್ಷಾಸ್ನಾನ ಪಡೆದುಕೊಂಡೆ.
ಕಾಲಾನಂತರ ನನ್ನ ಪತ್ನಿ, ಮಗ, ಮಗಳು ಕೂಡ ಯೆಹೋವನ ಸಾಕ್ಷಿಗಳಾದರು. ಈಗ ನಾನು ಸಭೆಯಲ್ಲಿ ಒಬ್ಬ ಹಿರಿಯನಾಗಿ ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಸಲ್ಲಿಸುವುದರಲ್ಲಿ ಆನಂದಿಸುತ್ತಿದ್ದೇನೆ. ಯೆಹೋವ ದೇವರನ್ನು ತಿಳಿಯಲು ಮತ್ತು ಆತನ ಅನುಗ್ರಹಕ್ಕೆ ಪಾತ್ರನಾಗುವುದೇ ನನಗೆ ಸಿಕ್ಕಿದ ಅತ್ಯಮೂಲ್ಯ ಸದವಕಾಶ. ಇದಕ್ಕಿಂತ ಹೆಚ್ಚಿನ ದರ್ಜೆ, ಹುದ್ದೆ ಬೇರೊಂದಿಲ್ಲ. ಹೌದು, ಶಿಸ್ತು ಎಂಬುದು ದಬ್ಬಾಳಿಕೆಯದ್ದೂ ಕಠೋರವಾದ್ದದ್ದು ಆಗಿರಬಾರದು ಬದಲಾಗಿ ಪ್ರೀತಿ ಮತ್ತು ಕಾಳಜಿಯಿಂದ ಕೂಡಿದ್ದಾಗಿರಬೇಕು. ಏಕೆಂದರೆ ಯೆಹೋವನು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುವ ದೇವರು. ಅದಕ್ಕೂ ಮಿಗಿಲಾಗಿ ಆತನು ಪ್ರೀತಿಯ ದೇವರು.—1 ಕೊರಿಂಥ 14:33, 40; 1 ಯೋಹಾನ 4:8. (g10-E 03)
[ಪಾದಟಿಪ್ಪಣಿ]
^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಈಗ ಮುದ್ರಿಸಲ್ಪಡುತ್ತಿಲ್ಲ.
[ಪುಟ 15ರಲ್ಲಿರುವ ಚಿತ್ರ
1950ರಲ್ಲಿ ಅಣ್ಣ ರೆನಾಟೋ ಮತ್ತು ನಾನು
[ಪುಟ 15ರಲ್ಲಿರುವ ಚಿತ್ರ]
ಚೀನಾ ಮತ್ತು ಇತರ ದೇಶಗಳ ಮಿಲಿಟರಿ ಸಿಬ್ಬಂದಿಯೊಂದಿಗೆ ಒಂದು ಸಾಮಾಜಿಕ ಒಕ್ಕೂಟದಲ್ಲಿ