ವಿಶ್ವ ವೀಕ್ಷಣೆ
ಆಗ್ನೇಯ ಏಷ್ಯಾ
ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಸಂಸ್ಥೆ ವರದಿಸಿದ ಪ್ರಕಾರ 1997ರಿಂದ 2011ರೊಳಗೆ ಹೊಸ ಹೊಸ ಜಾತಿಯ ಸಸ್ಯಗಳು, ಪ್ರಾಣಿಗಳು ಕಂಡುಬಂದವು. ಅವುಗಳಲ್ಲಿ ಒಂದು ಕೆಂಗಣ್ಣಿನ ಕುಳಿಮೂತಿ ಹಾವು. ಅವೆಲ್ಲ ಎಲ್ಲಿ ಕಂಡುಬಂದವು? ಕ್ಯಾಂಬೋಡಿಯ, ಲಾಓಸ್, ಮ್ಯಾನ್ಮಾರ್, ಥಾಯ್‍ಲೆಂಡ್, ವಿಯೆಟ್ನಾಮ್, ಚೀನಾದ ಯುನಾನ್ ಪ್ರಾಂತ ಇವೆಲ್ಲವನ್ನು ಹಾದುಹೋಗುವ ಗ್ರೇಟರ್ ಮೇಕಾಂಗ್ ಪ್ರದೇಶದಲ್ಲಿ. ಕೇವಲ ಇಸವಿ 2011ರಲ್ಲೇ ಹೊಸ ಜಾತಿಯ 82 ಸಸ್ಯಗಳು, 21 ಸರೀಸೃಪಗಳು, 13 ಮೀನುಗಳು, 5 ಉಭಯಚರಗಳು, 5 ಸಸ್ತನಿಗಳು ಬೆಳಕಿಗೆ ಬಂದವು.
ಯೂರೋಪ್
ಕಾನೂನಿಗೆ ವಿರುದ್ಧವಾಗಿ ಮನುಷ್ಯರನ್ನು ಮಾರುವುದು “ಯೂರೋಪಿನ ಒಕ್ಕೂಟದಾದ್ಯಂತ” ಒಂದು ಗಂಭೀರ ಸಮಸ್ಯೆಯಾಗಿ ತಲೆದೋರಿದೆ ಎಂದು ದ ಮಾಸ್ಕೋ ಟೈಮ್ಸ್ನಲ್ಲಿ ಬಂದ ಒಂದು ವರದಿ ಹೇಳಿತು. ಜನರನ್ನು ಲೈಂಗಿಕ ಶೋಷಣೆಗೆ, ದೌರ್ಜನ್ಯದ ದುಡಿಮೆಗೆ ಮಾರಲಾಗುತ್ತಿದೆ. ಅಲ್ಲದೆ, “ಮಾನವ ಅಂಗಾಂಗಗಳನ್ನು ಸಹ ಅಕ್ರಮವಾಗಿ” ಮಾರಲಾಗುತ್ತಿದೆ. ಇಂಥ ದುಷ್ಕೃತ್ಯಕ್ಕೆ ಜನರ ಬಡತನ, ನಿರುದ್ಯೋಗ ಸಮಸ್ಯೆ ಮತ್ತು ಪುರುಷ-ಸ್ತ್ರೀ ಅಸಮಾನತೆಯನ್ನು ಬಳಸಿಕೊಳ್ಳಲಾಗುತ್ತಿದೆ.
ನ್ಯೂಜಿಲೆಂಡ್
ಮಕ್ಕಳ ಮತ್ತು ಯೌವನಸ್ಥರ ಟಿವಿ ವೀಕ್ಷಣೆಯ ಕುರಿತು ನಡೆಸಲಾದ ಸಂಶೋಧನೆಯಿಂದ ಒಂದು ವಿಷಯ ತಿಳಿದುಬಂತು. ಏನೆಂದರೆ ಟಿವಿಯನ್ನು ಅತಿಯಾಗಿ ವೀಕ್ಷಿಸುವುದರಿಂದ ಪ್ರಾಪ್ತ ವಯಸ್ಸಿಗೆ ಬರುವಾಗ ಅವರಲ್ಲಿ “ಸಮಾಜ ವಿರೋಧಿ ಗುಣಗಳು” ಹುಟ್ಟಿಕೊಂಡಿವೆ. ಈ ಸಂಶೋಧನೆಯು ಅಮೆರಿಕದ ಮಕ್ಕಳ ಶಿಕ್ಷಣ ಸಂಸ್ಥೆಯೊಂದು ಈ ಹಿಂದೆ ಶಿಫಾರಸ್ಸು ಮಾಡಿದ ವಿಷಯವನ್ನು ಒಪ್ಪಿಕೊಳ್ಳುತ್ತದೆ. ಅದರ ಪ್ರಕಾರ ಮಕ್ಕಳು “ದಿನಕ್ಕೆ 1 ಅಥವಾ 2 ಗಂಟೆಗಿಂತ ಹೆಚ್ಚು ಟಿವಿ ನೋಡಬಾರದು. ನೋಡುವ ಕಾರ್ಯಕ್ರಮವೂ ಒಳ್ಳೇ ಗುಣಮಟ್ಟದ್ದಾಗಿರಬೇಕು.”
ಅಲಾಸ್ಕ
ಅಲಾಸ್ಕದಲ್ಲಿ ಮೂಲನಿವಾಸಿಗಳಿರುವ ಹೆಚ್ಚಿನಾಂಶ ಹಳ್ಳಿಗಳು ಕಡಲತೀರ ಅಥವಾ ನದಿಗಳ ಸಮೀಪದಲ್ಲಿವೆ. ಇವುಗಳಲ್ಲಿ 86% ಹಳ್ಳಿಗಳು ನೆರೆ ಮತ್ತು ಸವೆತದಿಂದ ಬಾಧಿಸಲ್ಪಟ್ಟಿವೆ. ವರದಿಗಳಿಗನುಸಾರ ಅಲ್ಲಿ ತಾಪಮಾನವು ಹೆಚ್ಚುತ್ತಿರುವುದರಿಂದ ತೀರದಲ್ಲಿ ನೀರು ಹೆಪ್ಪುಗಟ್ಟುವುದು ತಡವಾಗುತ್ತಿದೆ. ಈ ದುಃಸ್ಥಿತಿಯಿಂದಾಗಿ ಎಲ್ಲ ಹಳ್ಳಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಾತ್ರವಲ್ಲ ಅವು ಚಳಿಗಾಲದ ಚಂಡಮಾರುತಕ್ಕೆ ಮೈಯೊಡ್ಡಿ ನಿಲ್ಲುವಂತಾಗಿದೆ.
ಪ್ರಪಂಚ
ವಾಯುಶಕ್ತಿ ಮತ್ತು ಸೌರಶಕ್ತಿಯಂಥ ಪರಿಸರವನ್ನು ಮಲಿನಗೊಳಿಸದ ಶಕ್ತಿಗಳನ್ನು ಉತ್ಪಾದಿಸಲು ತುಂಬ ಹಣ ವ್ಯಯಿಸಲಾಗುತ್ತಿದೆ. ಹಾಗಿದ್ದರೂ “ಈಗ ಸರಾಸರಿ ಶಕ್ತಿಯ ಉತ್ಪಾದನೆಯಲ್ಲಿ ಹೊರಬೀಳುತ್ತಿರುವ ಇಂಗಾಲದ ಡೈಆಕ್ಸೈಡ್ 20 ವರ್ಷಗಳ ಹಿಂದೆ ಎಷ್ಟಿತ್ತೋ ಅಷ್ಟೇ ಇದೆ” ಎಂದು ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿಯ ಕಾರ್ಯನಿರ್ವಹಣಾ ನಿರ್ದೇಶಕಿ ಮಾರಿಯಾ ವಾನ್ ಡೆರ್ ಹೂವೆನ್ ಹೇಳಿದ್ದಾರೆ. (g14-E 05)