ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ
ಕೊಟ್ಟ ಮಾತನ್ನು ಮರೆಯಬೇಡಿ
ಸಮಸ್ಯೆ
“ಏನೇ ಸಮಸ್ಯೆ ಬಂದರೂ ಕೈ ಬಿಡಬಾರದು, ಕಷ್ಟ ಬರಲಿ-ಸುಖ ಬರಲಿ ಜೀವನಪೂರ್ತಿ ಜೊತೆಯಾಗಿಯೇ ಇರಬೇಕು” ಎಂದು ನಿಮ್ಮ ಮದುವೆಯ ದಿನ ಒಬ್ಬರಿಗೊಬ್ಬರು ದೃಢವಾಗಿ ಮಾತು ಕೊಟ್ಟಿರುತ್ತೀರಿ.
ಆದರೆ ವರ್ಷಗಳು ಉರುಳಿದಂತೆ ಜಗಳ-ಸಮಸ್ಯೆಗಳು ನಿಮ್ಮಿಬ್ಬರ ಮಧ್ಯೆ ಬಿರುಕು ತಂದಿರಬಹುದು. ಇದರಿಂದ, ಮದುವೆ ದಿನ ನಿಮ್ಮಿಬ್ಬರಲ್ಲಿ ಇದ್ದಂಥ ದೃಢಸಂಕಲ್ಪ ಅಲುಗಾಡುತ್ತಿದೆ ಅಂತ ನಿಮಗೆ ಅನಿಸುತ್ತಿದೆಯಾ?
ನಿಮಗಿದು ತಿಳಿದಿರಲಿ
ಕೊಟ್ಟ ಮಾತಿಗೆ ತಕ್ಕಂತೆ ನಡೆಯುವುದು ನಿಮ್ಮ ಬಂಧವನ್ನು ಕಾಪಾಡುತ್ತದೆ. ‘ಜೀವನ ಪೂರ್ತಿ ಒಬ್ಬರ ಜೊತೆ ಇರುತ್ತೇವೆ ಅಂತ ಹೇಳುವುದು ಸುಲಭ ಆದರೆ ನಡೆದುಕೊಳ್ಳುವುದು ಕಷ್ಟ’ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ನೆನಪಿಡಿ, ದೋಣಿ ತೇಲಿ ಹೋಗದೆ ದೃಢವಾಗಿ ಒಂದೇ ಕಡೆ ನಿಲ್ಲಲು ಹೇಗೆ ಒಂದು ಲಂಗರು ಸಹಾಯ ಮಾಡುತ್ತದೋ ಹಾಗೆಯೇ ಸಂಗಾತಿಗೆ ಕೊಟ್ಟ ಮಾತಿನಂತೆ ನಡೆಯುವುದು ಮದುವೆ ಬಂಧ ದೃಢವಾಗಿರಲು ಸಹಾಯ ಮಾಡುತ್ತದೆ. ‘ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ನಾವಾಗಲಿ, ನಮ್ಮ ಸಂಗಾತಿಯಾಗಲಿ ದೂರವಾಗುವುದಿಲ್ಲ ಅಂತ ಧೈರ್ಯದಿಂದ ಇರಲು ಮದುವೆ ದಿನ ನಾವು ಮಾಡಿದಂಥ ಪ್ರತಿಜ್ಞೆ ಸಹಾಯ ಮಾಡುತ್ತದೆ’ ಎಂದು ಮೇಗನ್ ಎಂಬ ಸ್ತ್ರೀ ಹೇಳುತ್ತಾಳೆ. * ನಮ್ಮ ಮದುವೆ ಶಾಶ್ವತವಾಗಿರುತ್ತದೆ ಎಂಬ ನಂಬಿಕೆ ಇದ್ದರೆ ಅದೆಂಥ ಸಮಸ್ಯೆಗಳು ಬಂದರೂ ಬಗೆಹರಿಸಿಕೊಂಡು ಹೋಗುತ್ತೇವೆ.
ನೆನಪಿಡಿ: ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಬಂದಾಗೆಲ್ಲಾ ‘ಯಾಕಾದ್ರೂ ಮಾತು ಕೊಟ್ಟೆನೋ!’ ಅಂತ ಪಶ್ಚಾತ್ತಾಪ ಪಡಬೇಡಿ ಬದಲಿಗೆ ಮದುವೆ ದಿನ ನೀವು ಕೊಟ್ಟ ಮಾತನ್ನು ಬದಲಾಯಿಸದಿರಲು ಆದಷ್ಟು ಪ್ರಯತ್ನಿಸಿ. ಆದರೆ ಇದನ್ನು ಹೇಗೆ ಮಾಡಬಹುದು?
ನೀವೇನು ಮಾಡಬಹುದು?
ಯೋಚಿಸುವ ರೀತಿಯನ್ನು ಸರಿಪಡಿಸಿಕೊಳ್ಳಿ. ‘ಮದುವೆ ಒಂದು ಶಾಶ್ವತ ಬಂಧ.’ ಇದನ್ನು ಕೇಳಿಸಿಕೊಂಡರೆ ನಿಮಗೆ ದುಃಖ ಆಗುತ್ತಾ ಅಥವಾ ಸಂತೋಷ ಆಗುತ್ತಾ? ಸಮಸ್ಯೆ ಬಂದಾಗೆಲ್ಲ ಸಂಗಾತಿಯನ್ನು ಬಿಟ್ಟುಬಿಡಬೇಕು ಅಂತ ಅಂದುಕೊಳ್ಳುವುದು ದೊಡ್ಡ ತಪ್ಪು. ಮದುವೆ ದಿನ ಮಾಡಿದಂಥ ದೃಢತೀರ್ಮಾನ ಬದಲಾಗದೇ ಇರಬೇಕೆಂದರೆ ‘ಮದುವೆ ಅನ್ನೋದು ಶಾಶ್ವತ ಬಂಧ’ ಅಂತ ಒಪ್ಪಿಕೊಳ್ಳಬೇಕು.—ಬೈಬಲ್ ತತ್ವ: ಮತ್ತಾಯ 19:6.
ಕೆಟ್ಟ ಮಾದರಿ ನಿಮ್ಮನ್ನು ಪ್ರಭಾವಿಸದಂತೆ ನೋಡಿಕೊಳ್ಳಿ. ಮದುವೆಯ ಬಗ್ಗೆ ಒಳ್ಳೇ ಅಭಿಪ್ರಾಯ ಇಲ್ಲದಿರಲು ಕೆಲವೊಮ್ಮೆ ಹೆತ್ತವರ ಮಾದರಿಯೂ ಕಾರಣವಾಗಿರಬಹುದು. “ನಾನು ಚಿಕ್ಕವಳಿದ್ದಾಗಲೇ ನಮ್ಮ ಅಪ್ಪ-ಅಮ್ಮನಿಗೆ ವಿಚ್ಛೇದನವಾಯಿತು. ಹಾಗಾಗಿ ಮದುವೆಯ ಬಂಧ ಶಾಶ್ವತವಾಗಿರಲು ಸಾಧ್ಯವಿಲ್ಲ ಎಂಬ ಭಾವನೆ ನನ್ನಲ್ಲೂ ಇದೆ ಅನಿಸುತ್ತೆ” ಎಂದು ಲಿಯ ಎಂಬ ವಿವಾಹಿತ ಸ್ತ್ರೀ ಹೇಳುತ್ತಾಳೆ. ನಿಮ್ಮ ಅಪ್ಪ-ಅಮ್ಮ ತಪ್ಪು ಮಾಡಿದರು ಅಂತ ನೀವೂ ಹಾಗೇ ಮಾಡಬೇಕಾಗಿಲ್ಲ. ಸಂತೋಷಕರ ಮದುವೆ ಜೀವನ ನಡೆಸಲು ಖಂಡಿತ ಸಾಧ್ಯವಿದೆ ಎಂಬ ದೃಢ ಭರವಸೆ ನಿಮಗಿರಲಿ.—ಬೈಬಲ್ ತತ್ವ: ಗಲಾತ್ಯ 6:4, 5.
ಮನಸ್ಸಿಗೆ ನೋವಾಗುವ ಹಾಗೆ ಮಾತಾಡಬೇಡಿ. ಕೆಲವೊಮ್ಮೆ ನಿಮ್ಮ ಸಂಗಾತಿ ಜೊತೆ ಜಗಳ ಆಗುವಾಗ ನಿಮಗೇ ಗೊತ್ತಿಲ್ಲದೆ “ನನಗೆ ನಿನ್ನ ಜೊತೆ ಜೀವನ ಸಾಕಾಗಿ ಹೋಗಿದೆ, ಎಲ್ಲಾದರೂ ದೂರ ಹೋಗಿಬಿಡ್ತೀನಿ” ಅಥವಾ “ನೀನಿಲ್ಲ ಅಂದ್ರೆ ಇನ್ನೊಬ್ಬನು/ಳು” ಅಂತ ಹೇಳಿಬಿಡಬಹುದು. ಆದರೆ ಹೇಳಿದ ಮೇಲೆ ನಿಮಗೆ ಪಶ್ಚಾತ್ತಾಪ ಆಗಬಹುದು. ಹಾಗಾಗಿ ಅಂಥ ಮನನೋಯಿಸುವ ಮಾತುಗಳನ್ನು ಹೇಳಬೇಡಿ. ಅವು ನಿಮ್ಮಿಬ್ಬರ ಮಧ್ಯೆ ಬಿರುಕನ್ನು ತರುತ್ತದೆ. ಜೊತೆಗೆ, ಜಗಳವನ್ನು ಇನ್ನೂ ಹೆಚ್ಚು ಮಾಡುತ್ತದೆಯೇ ಹೊರತು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಆದ್ದರಿಂದ ಚುಚ್ಚು ಮಾತುಗಳನ್ನಾಡುವ ಬದಲು “ನಮ್ಮಿಬ್ಬರಿಗೂ ಬೇಜಾರಾಗಿದೆ, ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಅಂತ ಯೋಚಿಸೋಣ್ವಾ?” ಅಂತ ಹೇಳಿ.—ಬೈಬಲ್ ತತ್ವ: ಜ್ಞಾನೋಕ್ತಿ 12:18.
ನೀವಿಬ್ಬರೂ ಅನ್ಯೋನ್ಯವಾಗಿದ್ದೀರೆಂದು ಇತರರಿಗೆ ಗೊತ್ತಾಗಲಿ. ಕೆಲಸದ ಸ್ಥಳದಲ್ಲಿ ನಿಮ್ಮ ಟೇಬಲ್ ಮೇಲೆ ಸಂಗಾತಿಯ ಫೋಟೋ ಇಟ್ಟುಕೊಳ್ಳಿ. ನಿಮ್ಮ ಸಂಗಾತಿಯ ಬಗ್ಗೆ ಇತರರ ಹತ್ತಿರ ಒಳ್ಳೆಯದನ್ನೇ ಮಾತಾಡಿ. ನೀವು ಬೇರೆ ಊರಿಗೆ ಹೋದಾಗ ತಪ್ಪದೇ ದಿನಕ್ಕೆ ಒಂದು ಸಲವಾದರೂ ನಿಮ್ಮ ಸಂಗಾತಿಗೆ ಫೋನ್ ಮಾಡುವುದನ್ನು ಮರೆಯಬೇಡಿ. ಇತರರ ಹತ್ತಿರ ಮಾತಾಡುವಾಗ, “ನಾವು”, “ನಾನೂ ನನ್ನ ಹೆಂಡತಿ” ಅಥವಾ “ನಾನೂ ನಮ್ಮ ಯಜಮಾನ್ರು” ಅನ್ನುವ ಪದಗಳನ್ನು ಉಪಯೋಗಿಸಿ. ಇಂಥ ಪದಗಳನ್ನು ಉಪಯೋಗಿಸಿದರೆ ನೀವು ನಿಮ್ಮ ಸಂಗಾತಿಗೆ ಎಷ್ಟು ನಿಷ್ಠರಾಗಿದ್ದೀರ ಎಂದು ಇತರರು ಗುರುತಿಸುತ್ತಾರೆ ಮತ್ತು ಸ್ವತಃ ನಿಮ್ಮ ಮನಸ್ಸಿನಲ್ಲೂ ಅದು ಉಳಿಯುತ್ತದೆ.
ಒಳ್ಳೆಯ ಮಾದರಿಯನ್ನು ಅನುಕರಿಸಿ. ಮದುವೆ ಜೀವನವನ್ನು ಯಶಸ್ವಿಕರವಾಗಿ ನಡೆಸಿರುವವರ ಮಾದರಿಯನ್ನು ಅನುಕರಿಸಿ. “ಜೀವನಪೂರ್ತಿ ಒಬ್ಬರ ಜೊತೆ ಇರುವುದರ ಬಗ್ಗೆ ನಿಮಗೇನು ಅನಿಸುತ್ತದೆ ಮತ್ತು ಅದರಿಂದ ನಿಮ್ಮಿಬ್ಬರಿಗೆ ಹೇಗೆ ಸಹಾಯವಾಗಿದೆ?” ಎಂದು ಅವರನ್ನು ಕೇಳಿ. “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತ ಮಾಡುವನು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 27:17) ಇದನ್ನು ಅನ್ವಯಿಸುತ್ತಾ ಆದರ್ಶ ದಂಪತಿಗಳ ಸಲಹೆಯನ್ನು ಪಡೆಯಿರಿ. ▪ (g15-E 06)
^ ಪ್ಯಾರ. 7 ಸಂಗಾತಿಯು ಇನ್ನೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದರೆ ಮಾತ್ರ ವಿಚ್ಛೇದನ ಪಡೆಯುವಂತೆ ಬೈಬಲ್ ಅನುಮತಿಸುತ್ತದೆ. ಸೆಪ್ಟೆಂಬರ್ 8, 1995ರ ಎಚ್ಚರ! ಪತ್ರಿಕೆಯ ಪುಟ 10ರಲ್ಲಿರುವ ‘ಬೈಬಲಿನ ದೃಷ್ಟಿಕೋನ - ವ್ಯಭಿಚಾರ ಕ್ಷಮಿಸಬೇಕೊ ಅಥವಾ ಕ್ಷಮಿಸಬಾರದೊ?’ ಎಂಬ ಲೇಖನವನ್ನು ನೋಡಿ.