ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸೆಗೆ ಬಲಿಯಾದವರ ಹಕ್ಕುಗಳು ಸಮರ್ಥಿಸಲ್ಪಟ್ಟವು

ಹಿಂಸೆಗೆ ಬಲಿಯಾದವರ ಹಕ್ಕುಗಳು ಸಮರ್ಥಿಸಲ್ಪಟ್ಟವು

ಹಿಂಸೆಗೆ ಬಲಿಯಾದವರ ಹಕ್ಕುಗಳು ಸಮರ್ಥಿಸಲ್ಪಟ್ಟವು

ಫ್ರಾನ್ಸ್‌ನ ಸ್ಟ್ರಾಸ್ಬರ್ಗ್‌ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟ್‌ ಇಸವಿ 2007, ಮೇ 3ರಂದು, ರಿಪಬ್ಲಿಕ್‌ ಆಫ್‌ ಜಾರ್ಜಿಯದಲ್ಲಿನ ಯೆಹೋವನ ಸಾಕ್ಷಿಗಳ ಪರವಾಗಿ ಒಂದು ಸರ್ವಾನುಮತದ ತೀರ್ಪನ್ನಿತ್ತಿತು. ಯೆಹೋವನ ಸಾಕ್ಷಿಗಳನ್ನು ಅಮಾನವೀಯವಾಗಿ ಉಪಚರಿಸಲಾಗಿದೆ ಮತ್ತು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸಲಾಗಿದೆ ಎಂದು ಕೋರ್ಟ್‌ ಕಂಡುಕೊಂಡಿತು. ಮಾತ್ರವಲ್ಲ, ದಾಂದಲೆ ನಡೆಸಿದವರ ಮೇಲೆ ಯಾವುದೇ ಕಾನೂನುಬದ್ಧ ಕ್ರಮ ಕೈಗೊಳ್ಳದೆ ಇದ್ದದ್ದಕ್ಕಾಗಿ ಹಿಂದಿನ ಜಾರ್ಜಿಯಾ ಸರಕಾರಕ್ಕೆ ಛೀಮಾರಿ ಹಾಕಿತು. ಇಂಥ ನಿರ್ಣಯಕ್ಕೆ ಕಾರಣವೇನಾಗಿತ್ತು?

1999, ಅಕ್ಟೋಬರ್‌ 17ರಂದು ರಾಜಧಾನಿ ಟಬಿಲಿಸೀಯಲ್ಲಿನ ಯೆಹೋವನ ಸಾಕ್ಷಿಗಳ ಗ್ಲಡಾನೀ ಸಭೆಯಲ್ಲಿ ಸುಮಾರು 120 ಮಂದಿ ಶಾಂತಿಯುತವಾಗಿ ಆರಾಧನೆಗೋಸ್ಕರ ಕೂಡಿಬಂದಿದ್ದರು. ಇದ್ದಕ್ಕಿದ್ದಂತೆ ದೊಡ್ಡ ಗುಂಪೊಂದು ಕೂಟದ ಸ್ಥಳಕ್ಕೆ ನುಗ್ಗಿತು. ಅದರ ಮುಖ್ಯಸ್ಥನು ಆರ್ತಡಾಕ್ಸ್‌ ಪಾದ್ರಿಯ ಸ್ಥಾನದಿಂದ ಉಚ್ಛಾಟಿಸಲ್ಪಟ್ಟಿದ್ದ ವೆಸ್‌ಯೀಲ್‌ ಮಕಾಲಾವೀಶ್‌ವೀಲೀ ಎಂಬವನಾಗಿದ್ದನು. ಆ ಗುಂಪಿನವರು ಕೈಯಲ್ಲಿ ದೊಣ್ಣೆಗಳನ್ನೂ ಕಬ್ಬಿಣದ ಶಿಲುಬೆಗಳನ್ನೂ ಹಿಡಿದು ಹಾಜರಿದ್ದವರ ಮೇಲೆ ರೋಷಾವೇಶದಿಂದ ಆಕ್ರಮಣಮಾಡಿ ಅನೇಕರನ್ನು ಹೊಡೆದು ಗಾಯಮಾಡಿದರು. ಕೆಲವರು ತೀವ್ರ ಗಾಯಗೊಂಡರು. ಒಬ್ಬಾಕೆ ಸ್ತ್ರೀ ತನಗೆ ಬಿದ್ದ ಬಿಗಿ ಮುಷ್ಟಿಯ ಹೊಡೆತದಿಂದಾಗಿ ತನ್ನ ಕಣ್ಣನ್ನೇ ಕಳೆದುಕೊಂಡಳು. ಕಡಿಮೆಪಕ್ಷ ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಯೆಹೋವನ ಸಾಕ್ಷಿಗಳಲ್ಲಿ ಕೆಲವರು ಸಹಾಯವನ್ನು ಕೋರಿ ಪೊಲೀಸ್‌ ಠಾಣೆಗೆ ಹೋದಾಗ ಅಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಯನ್ನು ಭೇಟಿಯಾದರು. ಆ ಅಧಿಕಾರಿ, ತಾನಾಗಿದ್ದಿದ್ದರೆ ಇದಕ್ಕಿಂತ ಇನ್ನೂ ಹೆಚ್ಚು ಹಿಂಸಿಸುತ್ತಿದ್ದೆ ಎಂದು ಹೇಳಿದನು! ನಡೆದ ಆಕ್ರಮಣವನ್ನು ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ವಿಡಿಯೋಟೇಪ್‌ ಮಾಡಿದ್ದನು ಮತ್ತು ತದನಂತರ ಅದು ನ್ಯಾಷನಲ್‌ ಟೆಲಿವಿಷನ್‌ ಸ್ಟೇಷನ್‌ಗಳಲ್ಲಿ ಪ್ರಸಾರವಾಯಿತು. ಈ ವಿಡಿಯೋದಿಂದ ಹಲ್ಲೆ ಮಾಡಿದವರು ಯಾರೆಂಬುದು ಸ್ಪಷ್ಟವಾಯಿತು. *

ಹಿಂಸೆಗೆ ಬಲಿಯಾದವರು ನಿಯಮಾನುಸಾರವಾಗಿ ದೂರು ಸಲ್ಲಿಸಿದರು. ಆದರೆ ಅಧಿಕಾರಿಗಳು ಹಲ್ಲೆಗೈದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಸಂಬಂಧವಾಗಿ ಪರಿಶೀಲನೆ ನಡೆಸುವಂತೆ ನೇಮಿಸಲ್ಪಟ್ಟ ಪೊಲೀಸ್‌ ತನಿಖಾಧಿಕಾರಿ ತಾನೊಬ್ಬ ಆರ್ತಡಾಕ್ಸ್‌ ಚರ್ಚ್‌ನ ಸದಸ್ಯನಾಗಿದ್ದರಿಂದ ಈ ಮೊಕದ್ದಮೆಯಲ್ಲಿ ನಿಷ್ಪಕ್ಷಪಾತಿಯಾಗಿರಲು ಸಾಧ್ಯವಾಗಲಿಲ್ಲ ಎಂದು ಹೇಳಿದನು. ಸಿವಿಲ್‌ ಅಧಿಕಾರಿಗಳ ನಿರ್ಲಕ್ಷ್ಯವು, ಆ ಧಾರ್ಮಿಕ ಉಗ್ರಗಾಮಿಗಳು ಅಂಥ ನೂರಕ್ಕಿಂತಲೂ ಹೆಚ್ಚು ಆಕ್ರಮಣಗಳನ್ನು ಮುಂದುವರಿಸುವಂತೆ ಕುಮ್ಮಕ್ಕುಕೊಟ್ಟಿತು.

ಆದುದರಿಂದ 2001, ಜೂನ್‌ 29ರಂದು, ಯೆಹೋವನ ಸಾಕ್ಷಿಗಳು ಮಾನವಹಕ್ಕುಗಳ ಯೂರೋಪಿಯನ್‌ ಕೋರ್ಟ್‌ಗೆ ಮನವಿ ಮಾಡಿದರು. * 2007, ಮೇ 3ರಂದು ಕೋರ್ಟ್‌ ಅಂತಿಮ ತೀರ್ಪನ್ನಿತ್ತಿತು ಮತ್ತು ಅದರಲ್ಲಿ ಹಲ್ಲೆಯ ಸುಸ್ಪಷ್ಟ ವಿವರಣೆ ನೀಡಿತು. ಅಲ್ಲದೆ ಜಾರ್ಜಿಯದ ಸರಕಾರೀ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇದ್ದದ್ದಕ್ಕಾಗಿ ಖಂಡಿಸಿತು. ಆಕ್ರಮಣದ ಕುರಿತು “ಅಧಿಕಾರಿಗಳು . . . ಕೂಡಲೇ ಪರಿಶೋಧನೆ ನಡೆಸಿ ತಮ್ಮ ಕರ್ತವ್ಯ ನಿರ್ವಹಿಸಬೇಕಿತ್ತು” ಎಂದು ಕೋರ್ಟ್‌ ತಿಳಿಸಿತು. ಬಳಿಕ ಕೋರ್ಟ್‌ ನಿರ್ಣಯಿಸಿದ್ದು: “ಆದರೆ ಅಂಥ ದುರಾಕ್ರಮಣಗಳ ಕಡೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾನೂನು ಮತ್ತು ಅದನ್ನು ಸಂರಕ್ಷಿಸಬೇಕಾದ ಸರಕಾರದ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಸಡಿಲಗೊಳಿಸುತ್ತದೆ.”

ಸಮಾಪ್ತಿಯಲ್ಲಿ ಕೋರ್ಟ್‌ ತಿಳಿಸಿದ್ದು: “ಅರ್ಜಿದಾರರ ಮೇಲೆ 1999, ಅಕ್ಟೋಬರ್‌ 17ರಂದು ನಡೆಸಲಾದ ಆಕ್ರಮಣವು ಯೆಹೋವನ ಸಾಕ್ಷಿಗಳ ವಿರುದ್ಧ ನಡೆಸಲಾದ ಮೊದಲ ಅತಿ ದೊಡ್ಡ ಹಲ್ಲೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಅದೇ ಹಲ್ಲೆಗಾರರ ಗುಂಪಿನಿಂದ ಜಾರ್ಜಿಯದ ಎಲ್ಲೆಡೆಯೂ ಧಾರ್ಮಿಕ ಹಿಂಸಾಕೃತ್ಯವು ವ್ಯಾಪಕವಾಗಿ ಹರಡಿದೆ.”

ಈ ತೀರ್ಪಿನ ಪರಿಣಾಮವಾಗಿ ಹಿಂಸೆಗೀಡಾದವರ ಹಕ್ಕುಗಳು ಸಮರ್ಥಿಸಲ್ಪಟ್ಟವು. ಮಾತ್ರವಲ್ಲ, ಜಾರ್ಜಿಯ ಸರಕಾರವು ಗ್ಲಡಾನೀ ಸಭೆಯ ಸದಸ್ಯರಿಗೆ ನಷ್ಟಭರ್ತಿ ಮಾಡುವಂತೆ ಮತ್ತು ಅವರ ನ್ಯಾಯಾಲಯದ ವೆಚ್ಚವನ್ನು ಭರಿಸುವಂತೆ ಕೋರ್ಟ್‌ ಆದೇಶವನ್ನಿತ್ತಿತು. ಜಾರ್ಜಿಯದಲ್ಲಿರುವ ಯೆಹೋವನ ಸಾಕ್ಷಿಗಳಾದರೋ ಹಿಂಸಾಕೃತ್ಯ ಮತ್ತು ಪಾಶವೀಯತೆ ಬಹುಮಟ್ಟಿಗೆ ನಿಲ್ಲಿಸಲ್ಪಟ್ಟ ಕಾರಣ ಸಂತೋಷಿಸುತ್ತಾರೆ. ಮತ್ತು ಶಾಂತಿಯುತವಾಗಿ ಆರಾಧನೆಗೋಸ್ಕರ ಒಟ್ಟುಸೇರಲು ತಮಗಿರುವ ಹಕ್ಕನ್ನು ಕೋರ್ಟ್‌ ಸಮರ್ಥಿಸಿದ್ದಕ್ಕಾಗಿಯೂ ಹರ್ಷಿಸುತ್ತಾರೆ. ಈ ಎಲ್ಲ ಸಮಯಗಳಲ್ಲಿ, ತಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಂದ ಪಡಕೊಂಡ ಮಾರ್ಗದರ್ಶನ ಮತ್ತು ಸಂರಕ್ಷಣೆಗಾಗಿ ಅವರು ನಿಜವಾಗಿಯೂ ಆಭಾರಿಗಳಾಗಿದ್ದಾರೆ.—ಕೀರ್ತನೆ 23:4. (w08 3/1)

[ಪಾದಟಿಪ್ಪಣಿಗಳು]

^ ಪ್ಯಾರ. 3 ವಿವರಕ್ಕಾಗಿ, 2002, ಜನವರಿ 22ರ ಎಚ್ಚರ! (ಇಂಗ್ಲಿಷ್‌) ಪುಟ 18-24ನ್ನು ನೋಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.

^ ಪ್ಯಾರ. 5 ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟ್‌, ಯುರೋಪ್‌ ಕೌನ್ಸಿಲ್‌ನ ಅಂಗವಾಗಿದೆ. ಅದು, ಮಾನವ ಹಕ್ಕುಗಳ ಮತ್ತು ಮೂಲಭೂತ ಸ್ವಾತಂತ್ರ್ಯಗಳ ಸಂರಕ್ಷಣೆಗಾಗಿರುವ ಯೂರೋಪಿಯನ್‌ ಸಾಮಾಜಿಕ ರೀತಿನೀತಿಯ (ಕನ್ವೆನ್‌ಷನ್‌) ಉಲ್ಲಂಘನೆಗಳ ವಿಷಯದಲ್ಲಿ ತೀರ್ಪುಮಾಡುತ್ತದೆ. ಜಾರ್ಜಿಯ ದೇಶ ಮಾನವ ಹಕ್ಕುಗಳ ಈ ರೀತಿನೀತಿಗಳನ್ನು 1999, ಮೇ 20ರಂದು ಅಂಗೀಕರಿಸಿದ್ದರಿಂದ ಅದರ ಕಾಯಿದೆಗಳನ್ನು ಪಾಲಿಸಲು ಬದ್ಧವಾಗಿದೆ.