“ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ”
ದೇವರ ಸಮೀಪಕ್ಕೆ ಬನ್ನಿರಿ
“ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ”
ವಿಶಾಲವಾಗಿರುವ ಈ ವಿಶ್ವಕ್ಕೆ ಹೋಲಿಸುವಾಗ ಮಾನವರು ಕ್ಷುಲ್ಲಕರೇ ಸರಿ. ಹಾಗಿರುವಾಗ, ‘ಸರ್ವಶಕ್ತ ದೇವರೊಂದಿಗೆ ಅಲ್ಪ ಮಾನವರು ಆಪ್ತ ಸ್ನೇಹ ಬೆಳೆಸುವುದು ನಿಜಕ್ಕೂ ಸಾಧ್ಯವೋ?’ ಎಂದು ನೀವು ಯೋಚಿಸಿರಬಹುದು. ಯಾರ ಹೆಸರು ಯೆಹೋವ ಎಂದಾಗಿದೆಯೋ ಆ ದೇವರು ಇಷ್ಟಪಟ್ಟರೆ ಮಾತ್ರ ಅದು ಸಾಧ್ಯ. ಆತನಿಗೆ ಇಷ್ಟವಿದೆಯೋ? ಇದಕ್ಕೆ ಉತ್ತರವನ್ನು, ಅಥೇನೆ ಪಟ್ಟಣದಲ್ಲಿನ ವಿದ್ಯಾವಂತ ಜನರಿಗೆ ಪೌಲನು ಹೇಳಿದ ಸ್ಫುಟವಾದ ಮಾತುಗಳಲ್ಲಿ ಕಂಡುಕೊಳ್ಳಬಹುದು. ಇದು ಅಪೊಸ್ತಲರ ಕೃತ್ಯಗಳು 17:24-27ರಲ್ಲಿ ದಾಖಲಾಗಿದೆ. ಈ ವಚನಗಳಲ್ಲಿ, ಯೆಹೋವನ ಕುರಿತು ಪೌಲನು ತಿಳಿಸಿದ ನಾಲ್ಕು ವಿಷಯಗಳನ್ನು ಗಮನಿಸಿರಿ.
ಒಂದನೆಯದಾಗಿ, ದೇವರು ‘ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದನು’ ಎಂಬುದಾಗಿ ಪೌಲನು ತಿಳಿಸುತ್ತಾನೆ. (ವಚನ 24) ನಮ್ಮ ಜೀವನವನ್ನು ಹರ್ಷಕರವನ್ನಾಗಿ ಮಾಡುವ ಜಗತ್ತಿನ ಸುಂದರವಾದ ವೈವಿಧ್ಯಮಯ ವಿಷಯಗಳು ನಮ್ಮ ನಿರ್ಮಾಣಿಕನ ಪ್ರೀತಿ ಮತ್ತು ಆಲೋಚನಾಪರತೆಗೆ ಸಾಕ್ಷ್ಯವಾಗಿವೆ. (ರೋಮಾಪುರ 1:20) ಅಂಥ ದೇವರು ತಾನು ಪ್ರೀತಿಸುವ ಸೃಷ್ಟಿಗಳಿಂದ ದೂರವಿರಲು ಬಯಸುತ್ತಾನೆಂದು ಯೋಚಿಸುವುದು ಅಸಂಬದ್ಧವೇ ಸರಿ.
ಎರಡನೆಯದಾಗಿ, ಯೆಹೋವನು ‘ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿದ್ದಾನೆ.’ (ವಚನ 25) ಯೆಹೋವನು ಜೀವದ ಪೋಷಕನು. (ಕೀರ್ತನೆ 36:9) ಜೀವಿಸಲು ಅಗತ್ಯವಾಗಿರುವ ಗಾಳಿ, ನೀರು, ಆಹಾರ ಮುಂತಾದವೆಲ್ಲವೂ ನಮ್ಮ ಸೃಷ್ಟಿಕರ್ತನಿಂದ ಬಂದಿರುವ ಕೊಡುಗೆಗಳಾಗಿವೆ. (ಯಾಕೋಬ 1:17) ಇಂಥ ಉದಾರ ಮನಸ್ಸಿನ ದೇವರು, ಆತನು ಯಾರೆಂದು ತಿಳಿದುಕೊಳ್ಳುವ ಮತ್ತು ಆತನ ಸಮೀಪಕ್ಕೆ ಬರುವ ಅವಕಾಶವನ್ನು ನಮಗೆ ಕೊಡದಿರುವನೋ?
ಮೂರನೆಯದಾಗಿ, ದೇವರು ‘ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿದನು.’ (ವಚನ 26) ಯೆಹೋವ ದೇವರು ಪಕ್ಷಪಾತಿಯಲ್ಲ ಮತ್ತು ಯಾವುದೇ ರೀತಿಯ ಪೂರ್ವಾಗ್ರಹವು ಆತನಲ್ಲಿ ಇಲ್ಲ. (ಅ. ಕೃತ್ಯಗಳು 10:35) ಹೀಗಿರುವಾಗ ಪಕ್ಷಪಾತ ಅಥವಾ ಪೂರ್ವಾಗ್ರಹವನ್ನು ಆತನು ಹೇಗೆ ತೋರಿಸಾನು? ಆತನು ‘ಒಬ್ಬನನ್ನು’ ಅಂದರೆ ಆದಾಮನನ್ನು ಉಂಟುಮಾಡಿದನು. ಆ ಮನುಷ್ಯನಿಂದಲೇ ಸಕಲ ಜನಾಂಗಕುಲಗಳು ಹುಟ್ಟಿಬಂದಿವೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು [ದೇವರ] ಚಿತ್ತವಾಗಿದೆ.” (1 ತಿಮೊಥೆಯ 2:4) ಆದುದರಿಂದ, ನಾವು ಯಾವುದೇ ದೇಶ, ಜಾತಿ ಇಲ್ಲವೆ ಬಣ್ಣದವರಾಗಿರಲಿ ಆತನ ಸಮೀಪಕ್ಕೆ ಬರುವ ಸದವಕಾಶವು ನಮಗೆಲ್ಲರಿಗೂ ತೆರೆದಿಡಲ್ಪಟ್ಟಿದೆ.
ಕೊನೆಯದಾಗಿ, ಪೌಲನು ಒಂದು ಅತ್ಯಂತ ಭರವಸಾರ್ಹ ಸತ್ಯವನ್ನು ತಿಳಿಸುತ್ತಾನೆ. ಅದೇನೆಂದರೆ ಯೆಹೋವನು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ವಚನ 27) ಯೆಹೋವನು ಅತಿ ಉನ್ನತ ಸ್ಥಾನದಲ್ಲಿರುವುದಾದರೂ, ತನ್ನನ್ನು ಯಥಾರ್ಥವಾಗಿ ಸಮೀಪಿಸ ಬಯಸುವವರಿಗೆ ಆತನು ಸುಲಭವಾಗಿ ಸಿಕ್ಕುವನು. ಆತನು ನಮಗೆ ದೂರವಾದವನಲ್ಲ, ಬದಲಿಗೆ ಮೊರೆಯಿಡುವವರಿಗೆ “ಹತ್ತಿರವಾಗಿಯೇ ಇದ್ದಾನೆ” ಎಂದು ಬೈಬಲ್ ಆಶ್ವಾಸನೆ ನೀಡುತ್ತದೆ.—ಕೀರ್ತನೆ 145:18.
ನಾವು ಆತನಿಗೆ ಸಮೀಪವಾಗಿರಬೇಕೆಂದು ದೇವರು ಬಯಸುತ್ತಾನೆ ಎಂದು ಪೌಲನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆದರೂ, ತನ್ನನ್ನು ‘ಹುಡುಕಲು’ ಅಥವಾ ‘ತಡವಾಡಿ ಕಂಡುಕೊಳ್ಳಲು’ ಸಿದ್ಧಮನಸ್ಸಿನಿಂದ ಮುಂದೆ ಬರುವವರಿಗೆ ಮಾತ್ರ ಆತನು ಅಂಥ ಆಪ್ತತೆಯನ್ನು ಅನುಗ್ರಹಿಸುತ್ತಾನೆ. (ವಚನ 27) ಇಲ್ಲಿರುವ “ಎರಡೂ ಕ್ರಿಯಾಪದಗಳು, ‘ಸಿಗಸಾಧ್ಯವಿರುವ’ . . . ಇಲ್ಲವೇ ‘ಸಿಗಲು ಅಪೇಕ್ಷಿಸುವ’ ಎಂಬರ್ಥವನ್ನು ಕೊಡುತ್ತವೆ” ಎಂದು ಬೈಬಲ್ ಭಾಷಾಂತರಕಾರರ ಒಂದು ನಿರ್ದೇಶಕ ಕೃತಿಯು ಹೇಳುತ್ತದೆ. ಉದಾಹರಣೆಗೆ, ಕತ್ತಲೆಯ ಸಮಯದಲ್ಲಿ ನಿಮ್ಮ ಕೋಣೆಯೊಳಗೆ ಹೋದಿರೆಂದು ಭಾವಿಸಿ. ಆಗ ನೀವು ಲೈಟ್ ಸ್ವಿಚ್ಗಾಗಿಯೋ ಬಾಗಿಲ ಹಿಡಿಗಾಗಿಯೋ ತಡಕಾಡಬಹುದು. ಆದರೂ ನಿಮಗದು ಖಂಡಿತ ಸಿಗುತ್ತದೆ ಎಂದು ನಿಮಗೆ ಗೊತ್ತು. ಅದೇ ರೀತಿ, ನಾವು ಯಥಾರ್ಥವಾಗಿ ದೇವರನ್ನು ಹುಡುಕುವುದಾದರೆ ಮತ್ತು ತಡಕಾಡುವುದಾದರೆ ನಮ್ಮ ಪ್ರಯತ್ನಗಳಿಗೆ ಫಲಸಿಗುವುದು ಎಂಬ ಖಾತ್ರಿ ನಮಗಿರಬಲ್ಲದು. ನಾವು ಖಂಡಿತವಾಗಿ ಆತನನ್ನು ‘ಕಂಡುಕೊಳ್ಳುವೆವು’ ಎಂದು ಪೌಲನು ಭರವಸೆ ನೀಡುತ್ತಾನೆ.—ವಚನ 27.
ದೇವರಿಗೆ ಸಮೀಪವಾಗುವ ಹಂಬಲಿಕೆ ನಿಮಗಿದೆಯೋ? ನೀವು ನಂಬಿಕೆಯಿಂದ ಆತನನ್ನು ‘ಹುಡುಕಲು’ ಅಥವಾ ‘ತಡವಾಡಿ ಕಂಡುಕೊಳ್ಳಲು’ ತೊಡಗುವುದಾದರೆ, ನೀವೆಂದಿಗೂ ನಿರಾಶರಾಗುವುದಿಲ್ಲ. ಯೆಹೋವನನ್ನು ಹುಡುಕುವುದು ಕಷ್ಟವಲ್ಲ. ಏಕೆಂದರೆ “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (w08 7/1)