ಯೇಸು ಸರ್ವಶಕ್ತ ದೇವರೋ?
ಯೇಸು ಸರ್ವಶಕ್ತ ದೇವರೋ?
ಸಾಮಾನ್ಯ ಉತ್ತರಗಳು:
▪ “ಹೌದು, ಯೇಸುವೇ ಸರ್ವಶಕ್ತ ದೇವರು.”
▪ “ದೇವರು ನರಾವತಾರವೆತ್ತಿ ಯೇಸುವಾಗಿ ಬಂದನು.”
ಯೇಸು ಏನು ಹೇಳಿದನು?
▪ “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುವ ವಿಷಯದಲ್ಲಿ ಸಂತೋಷಪಡುತ್ತಿದ್ದಿರಿ; ಯಾಕಂದರೆ ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ಹೀಗೆ ಹೇಳುವ ಮೂಲಕ ತಾನು ಮತ್ತು ತನ್ನ ತಂದೆ ಇಬ್ಬರೂ ಸಮಾನರಲ್ಲ ಎಂದು ಯೇಸು ಒಪ್ಪಿಕೊಂಡನು.
▪ “ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ.” (ಯೋಹಾನ 20:17) ಇಲ್ಲಿ, ದೇವರನ್ನು ಪ್ರತ್ಯೇಕ ವ್ಯಕ್ತಿಯಾಗಿ ಸೂಚಿಸಿದನೇ ಹೊರತು ತನ್ನನ್ನೇ ದೇವರೆಂದು ಯೇಸು ಹೇಳಿಕೊಳ್ಳಲಿಲ್ಲ.
▪ “ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ—ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ.” (ಯೋಹಾನ 12:49) ಯೇಸು ತನ್ನ ಸ್ವಂತ ಇಷ್ಟದಂತೆ ಬೋಧಿಸಲಿಲ್ಲ, ತಂದೆಯು ಹೇಳಿಕೊಟ್ಟದ್ದನ್ನೇ ಬೋಧಿಸಿದನು ಎಂಬುದು ಇದರಿಂದ ಸ್ಪಷ್ಟ.
ಯೇಸು ತನ್ನನ್ನು ದೇವರ ಮಗನೆಂದು ಹೇಳಿಕೊಂಡನೇ ಹೊರತು ಸರ್ವಶಕ್ತ ದೇವರೆಂದು ಹೇಳಿಕೊಳ್ಳಲಿಲ್ಲ. ಯೇಸುವೇ ದೇವರಾಗಿದ್ದಲ್ಲಿ ಆತನು ಭೂಮಿಯಲ್ಲಿದ್ದಾಗ ಯಾರಿಗೆ ಪ್ರಾರ್ಥಿಸಿದನು? (ಮತ್ತಾಯ 14:23; 26:26-29) ಯೇಸು ಬೇರೆ ಯಾರೊಂದಿಗೋ ಮಾತಾಡುತ್ತಿರುವಂತೆ ಸುಮ್ಮನೆ ನಟಿಸಲಿಲ್ಲ ಎಂಬುದು ನಿಶ್ಚಯ!
ಯೇಸುವಿನ ಇಬ್ಬರು ಶಿಷ್ಯರು ಆತನ ರಾಜ್ಯದಲ್ಲಿ ತಮಗೆ ವಿಶೇಷ ಸ್ಥಾನ ಸಿಗಬೇಕೆಂದು ಕೇಳಿಕೊಂಡಾಗ ಆತನು ಉತ್ತರಕೊಟ್ಟದ್ದು: “ನನ್ನ ಎಡಬಲಗಡೆಗಳಲ್ಲಿ ಕೂತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲ; ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು.” (ಮತ್ತಾಯ 20:23) ಅವರ ವಿನಂತಿಯನ್ನು ಅನುಗ್ರಹಿಸುವ ಅಧಿಕಾರ ತನಗಿಲ್ಲ ಎಂದು ಯೇಸು ಹೇಳಿದಾಗ ಅವನು ಸುಳ್ಳು ಹೇಳುತ್ತಿದ್ದನೋ? ಖಂಡಿತ ಇಲ್ಲ! ಅಂಥ ನಿರ್ಣಯ ಮಾಡುವ ಅಧಿಕಾರ ಕೇವಲ ದೇವರೊಬ್ಬನಿಗೇ ಇದೆಯೆಂದು ಆತನು ದೀನತೆಯಿಂದ ಒಪ್ಪಿಕೊಂಡನು. ಅಷ್ಟುಮಾತ್ರವಲ್ಲ ಕೆಲವು ವಿಷಯಗಳು ತನಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ, ತನ್ನ ತಂದೆಗೆ ಮಾತ್ರ ತಿಳಿದಿದೆ ಎಂದು ಸಹ ಯೇಸು ಹೇಳಿದನು.—ಮಾರ್ಕ 13:32.
ಯೇಸು ಭೂಮಿಯಲ್ಲಿದ್ದಾಗ ಮಾತ್ರವೇ ದೇವರಿಗಿಂತ ಕಡಿಮೆಯವನಾಗಿದ್ದನೋ? ಇಲ್ಲ. ಯೇಸುವಿನ ಮರಣ ಮತ್ತು ಪುನರುತ್ಥಾನದ ಬಳಿಕವೂ ಅವನು ದೇವರಿಗಿಂತ ಕೆಳಗಿನವನು ಅಂದರೆ ಅಧೀನನಾಗಿದ್ದನೆಂದು ಬೈಬಲ್ ತಿಳಿಸುತ್ತದೆ. “ದೇವರು ಕ್ರಿಸ್ತನಿಗಿಂತ ಪರಮೋಚ್ಚನು” ಎಂದು ಅಪೊಸ್ತಲ ಪೌಲನು ನಮಗೆ ತಿಳಿಸುತ್ತಾನೆ. (1 ಕೊರಿಂಥ 11:3, ಟುಡೇಸ್ ಇಂಗ್ಲಿಷ್ ವರ್ಷನ್) ಭವಿಷ್ಯತ್ತಿನಲ್ಲಿ “ಸಮಸ್ತವೂ . . . ಅಧೀನವಾದ ಮೇಲೆ [ಕ್ರಿಸ್ತನು] ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ [ದೇವರಿಗೆ] ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು” ಎಂದು ಬೈಬಲ್ ಹೇಳುತ್ತದೆ.—1 ಕೊರಿಂಥ 15:28.
ಯೇಸು ಸರ್ವಶಕ್ತ ದೇವರಲ್ಲ ಎಂಬುದು ಸ್ಪಷ್ಟ. ಆದುದರಿಂದಲೇ ಆತನು ತನ್ನ ತಂದೆಯನ್ನು ‘ನನ್ನ ದೇವರು’ ಎಂದು ಸಂಬೋಧಿಸಿದನು.—ಪ್ರಕಟನೆ 3:2, 12; 2 ಕೊರಿಂಥ 1:3, 4. * (w09 2/1)
[ಪಾದಟಿಪ್ಪಣಿ]
^ ಪ್ಯಾರ. 12 ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 201-204 ನೋಡಿ.
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕೆಲವು ವಿಷಯಗಳು ತನಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ, ತನ್ನ ತಂದೆಗೆ ಮಾತ್ರ ತಿಳಿದಿದೆ ಎಂದು ಯೇಸು ಹೇಳಿದನು