ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಸಿಮಾಡುವ ಪವಾಡ ದೇವರಿಂದಲೋ?

ವಾಸಿಮಾಡುವ ಪವಾಡ ದೇವರಿಂದಲೋ?

ನಮ್ಮ ಓದುಗರ ಪ್ರಶ್ನೆ

ವಾಸಿಮಾಡುವ ಪವಾಡ ದೇವರಿಂದಲೋ?

ಯೆಹೋವ ದೇವರಿಗೆ ರೋಗವಾಸಿ ಮಾಡುವ ಶಕ್ತಿಯಿದೆ ಎಂಬದರಲ್ಲಿ ಎಳ್ಳಿನ ಏಳರಷ್ಟೂ ಅನುಮಾನವಿಲ್ಲ. ಆತನು ತನ್ನ ಆರಾಧಕರಿಗೂ ಆ ಶಕ್ತಿಯನ್ನು ಕೊಡಬಲ್ಲನೆಂಬುದರಲ್ಲೂ ಏನೂ ಸಂಶಯವಿಲ್ಲ. ದೃಷ್ಟಾಂತಕ್ಕಾಗಿ, ಅಪೊಸ್ತಲರ ಕಾಲದಲ್ಲಿ ಅದ್ಭುತಕರ ರೋಗವಾಸಿಯು ಪವಿತ್ರಾತ್ಮದ ವಿಶೇಷ ವರಗಳಲ್ಲಿ ಒಂದಾಗಿತ್ತು. ಅಪೊಸ್ತಲ ಪೌಲನು ಬರೆದದ್ದು: “ಪ್ರಯೋಜನಕರವಾದ ಉದ್ದೇಶಕ್ಕಾಗಿಯೇ ಪ್ರತಿಯೊಬ್ಬನಿಗೆ ಪವಿತ್ರಾತ್ಮದ ಸಾಕ್ಷ್ಯವು ಕೊಡಲ್ಪಟ್ಟಿದೆ. ಉದಾಹರಣೆಗೆ, ಒಬ್ಬನಿಗೆ ಪವಿತ್ರಾತ್ಮದ ಮೂಲಕ ವಿವೇಕದಿಂದ ಮಾತಾಡುವ ವರ, . . . ಒಬ್ಬನಿಗೆ ಅದೇ ಪವಿತ್ರಾತ್ಮದಿಂದ ವಾಸಿಮಾಡುವ ವರಗಳು, . . . ಒಬ್ಬನಿಗೆ ಪ್ರವಾದಿಸುವ ವರ, . . . ಒಬ್ಬನಿಗೆ ವಿವಿಧ ಭಾಷೆಗಳಲ್ಲಿ ಮಾತಾಡುವ ವರ . . . ಕೊಡಲ್ಪಟ್ಟಿದೆ.”—1 ಕೊರಿಂಥ 12:4-11.

ಆದರೂ ಕೊರಿಂಥದವರಿಗೆ ಬರೆದ ಅದೇ ಪತ್ರದಲ್ಲಿ ದೇವರ ಪವಿತ್ರಾತ್ಮದ ಅದ್ಭುತಕರ ವರಗಳು ಇಲ್ಲದೆ ಹೋಗುವುವು ಎಂದೂ ಪೌಲನು ಬರೆದನು. ಅವನಂದದ್ದು: “ಪ್ರವಾದಿಸುವ ವರಗಳಿರುವುದಾದರೆ ಅವು ಇಲ್ಲವಾಗುವವು; ಭಾಷೆಗಳ ವರಗಳಿರುವುದಾದರೆ ಅವು ನಿಂತುಹೋಗುವವು; ಜ್ಞಾನವಿರುವುದಾದರೆ ಅದು ಇಲ್ಲವಾಗುವುದು.”—1 ಕೊರಿಂಥ 13:8.

ಪ್ರಥಮ ಶತಮಾನದಲ್ಲಿ ಯೇಸು ಕ್ರಿಸ್ತನು ಮತ್ತು ಅವನ ಅಪೊಸ್ತಲರು ರೋಗಗಳನ್ನು ಅದ್ಭುತಕರವಾಗಿ ವಾಸಿಮಾಡಿದರು. ಕ್ರೈಸ್ತ ಇತಿಹಾಸದ ಆರಂಭದ ಆ ಸಮಯದಲ್ಲಿ, ವಾಸಿಮಾಡುವ ವರವೂ ಸೇರಿದಂತೆ ಪವಿತ್ರಾತ್ಮದ ವರಗಳು ದೇವರನ್ನು ಮಹಿಮೆಪಡಿಸುವ ಉದ್ದೇಶದಿಂದ ಕೊಡಲಾದವು. ಮತ್ತು ಕ್ರೈಸ್ತ ಸಭೆಯು ಹೊಸದಾಗಿ ಸ್ಥಾಪಿಸಲ್ಪಟ್ಟಾಗ ಆ ವರಗಳು ಯೆಹೋವನ ಆಶೀರ್ವಾದ ಮತ್ತು ಅನುಗ್ರಹದ ಸಂಕೇತವಾಗಿದ್ದವು. ಆದರೆ ಒಮ್ಮೆ ಕ್ರೈಸ್ತ ಸಭೆಯು ಪೂರ್ಣವಾಗಿ ಬೆಳೆದು ಪಕ್ವಗೊಂಡಾಗ ಆ ವಿಶೇಷ ವರಗಳು ದೇವರ ಅನುಗ್ರಹದ ಪುರಾವೆಯಾಗಿರುವುದು ಕೊನೆಗೊಂಡವು. ಅದಕ್ಕೆ ಬದಲು ಸ್ವತಃ ಕ್ರೈಸ್ತ ಸಭೆಯು ತನ್ನ ನಿಶ್ಚಲವಾದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ದೇವರ ಅನುಗ್ರಹದ ಪುರಾವೆಯಾಗಿ ತೋರಿಸಬೇಕಿತ್ತು. (ಯೋಹಾನ 13:35; 1 ಕೊರಿಂಥ 13:13) ಹೀಗೆ ಕ್ರಿ.ಶ. 100ರ ಸುಮಾರಿಗೆ ದೇವರ ಮೆಚ್ಚಿಗೆಯ ಗುರುತಾಗಿದ್ದ ಅದ್ಭುತಕರ ವಾಸಿಮಾಡುವಿಕೆಯ ವರಗಳು ನಿಂತುಹೋದವು. *

ಆದರೂ, ‘ವಾಸಿಮಾಡುವ ಪವಾಡಗಳ ಕುರಿತ ಸುದ್ದಿಗಳನ್ನು ನಾನಿನ್ನೂ ಕೇಳಿಸಿಕೊಳ್ಳುತ್ತೇನೆಲ್ಲಾ?’ ಎಂದು ನೀವು ಕೇಳಬಹುದು. ಉದಾಹರಣೆಗೆ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಬ್ಬ ಮನುಷ್ಯನ ಕುರಿತು ಒಂದು ವಾರ್ತಾ ಮಾಧ್ಯಮವು ವರದಿಸಿತು. ಅವನ ತಲೆಯಲ್ಲಿ, ಮೂತ್ರಪಿಂಡದಲ್ಲಿ, ಅವನ ಎಲುಬುಗಳೊಳಗೂ ಕ್ಯಾನ್ಸರ್‌ ಗಡ್ಡೆಗಳಿದ್ದವು. ಅವನ ಮುಂದಿದ್ದ ದಿನಗಳು ಕರಾಳವಾಗಿದ್ದವು. ಆದರೆ ಒಂದು ದಿನ ದೇವರು ಅವನೊಂದಿಗೆ ಮಾತಾಡಿದನಂತೆ. ಕೇವಲ ಕೆಲವೇ ದಿನಗಳ ಬಳಿಕ ಅವನ ಕ್ಯಾನ್ಸರ್‌ ರೋಗ ಮಾಯ ಎಂದಿತು ಆ ವರದಿ.

ಇಂಥಾ ಕಥೆಗಳು ಕೇಳಿಬರುವಾಗ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಈ ವರದಿಯು ನಿಜ ಸಂಗತಿಯೋ? ಆ ವ್ಯಕ್ತಿಯ ಹೇಳಿಕೆಗೆ ಆಧಾರವಾಗಿ ವೈದ್ಯಕೀಯ ಪುರಾವೆ ಇದೆಯೋ? ಒಂದುವೇಳೆ ಆ ವ್ಯಕ್ತಿ ವಾಸಿಯಾದನೆಂದು ತೋರಿಬಂದರೂ, ಅದ್ಭುತಕರ ವಾಸಿಗಳೋ ಎಂಬಂತೆ ತೋರಿಬರುವ ಎಲ್ಲವೂ ದೇವರ ಸಹಾಯದಿಂದಲೇ ಮಾಡಲ್ಪಟ್ಟವೆಂದು ಬೈಬಲ್‌ ಕಲಿಸುತ್ತದೋ?’

ಕೊನೆಯ ಪ್ರಶ್ನೆಗೆ ಉತ್ತರವು ವಿಶೇಷವಾಗಿ ಪ್ರಾಮುಖ್ಯ. ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ . . . ಆ ದಿನದಲ್ಲಿ ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು ನಿನ್ನ ಹೆಸರಿನಲ್ಲಿ ಪ್ರವಾದಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು [ಅದ್ಭುತಗಳನ್ನು] ಮಾಡಲಿಲ್ಲವೇ?’ ಎಂದು ಹೇಳುವರು. ಆದರೂ ಆಗ ನಾನು ಅವರಿಗೆ, ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:15, 21-23.

ಹಾಗಾದರೆ, ಪವಾಡಗಳೆಂದು ಹೇಳಲಾಗುವ ವಾಸಿಗಳು ದೇವರಿಂದಲ್ಲ, ಬೇರೊಂದು ಮೂಲದಿಂದಲೂ ನಡೆಯಸಾಧ್ಯವಿದೆ ಎಂಬುದು ಈ ವಚನದಿಂದ ಸ್ಪಷ್ಟ. ದೇವರ ಹೆಸರಿನಲ್ಲಿ ಅದ್ಭುತಗಳನ್ನು ಮಾಡುತ್ತೇವೆಂದು ಹೇಳುವವರಿಂದ ಮೋಸಹೋಗದಿರಲು ನಾವು ದೇವರ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆಯಬೇಕು. ಅಲ್ಲದೆ, ದೇವರು ನಮಗೆ ಕೊಟ್ಟಿರುವ ವಿವೇಚನೆಯನ್ನು ಉಪಯೋಗಿಸಬೇಕು ಮತ್ತು ಆತನ ಚಿತ್ತವನ್ನು ಮಾಡುತ್ತಿರುವವರನ್ನು ಗುರುತಿಸುವುದು ಹೇಗೆಂದು ಕಲಿಯಬೇಕು.—ಮತ್ತಾಯ 7:16-19; ಯೋಹಾನ 17:3; ರೋಮನ್ನರಿಗೆ 12:1, 2. (w09 5/1)

[ಪಾದಟಿಪ್ಪಣಿ]

^ ಪ್ಯಾರ. 5 ಕ್ರಿಸ್ತನ ಅಪೊಸ್ತಲರ ಮರಣಾನಂತರ ಪವಿತ್ರಾತ್ಮದ ವರಗಳು ದಾನವಾಗಿ ಸಿಗುವುದು ಕೊನೆಗೊಂಡಿತು. ಆ ವರಗಳನ್ನು ಪಡೆದಿದ್ದವರು ಸತ್ತಾಗಲಾದರೋ ಈ ಅದ್ಭುತಕರ ಪವಿತ್ರಾತ್ಮ ವರಗಳು ಪೂರ್ಣವಾಗಿ ನಿಂತುಹೋದವು.