ಯಾಕಿಷ್ಟು ಕಷ್ಟ?
ಯಾಕಿಷ್ಟು ಕಷ್ಟ? ಕಷ್ಟಗಳನ್ನು ತೆಗೆದುಹಾಕಲು ಮನುಷ್ಯ ಎಷ್ಟೇ ಪ್ರಯತ್ನಪಟ್ಟರೂ ಯಾಕೆ ಆಗುತ್ತಿಲ್ಲ? ಇದನ್ನು ಅರ್ಥಮಾಡಿಕೊಳ್ಳಲು ಕಷ್ಟಗಳ ಹಿಂದಿರುವ ಕಾರಣ ತಿಳಿಯಬೇಕು. ಅವನ್ನು ತಿಳಿಯಲು ಬೈಬಲ್ ನಮಗೆ ಸಹಾಯ ಮಾಡುತ್ತದೆ. ಕಾರಣಗಳು ಅನೇಕವಿದ್ದರೂ ಮುಖ್ಯವಾದ ಐದು ಕಾರಣಗಳನ್ನು ಈ ಲೇಖನದಲ್ಲಿ ನೋಡೋಣ.—2 ತಿಮೊಥೆಯ 3:16.
ಕೆಟ್ಟ ಆಡಳಿತ
“ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ; ದುಷ್ಟನ ಆಳಿಕೆ ಜನರಿಗೆ ನರಳಾಟ” ಎನ್ನುತ್ತದೆ ಬೈಬಲ್.—ಜ್ಞಾನೋಕ್ತಿ 29:2.
ಇತಿಹಾಸದಾದ್ಯಂತ ನಡೆದಿರುವುದು ತಾವು ಹೇಳಿದ ಹಾಗೇ ಆಗಬೇಕು ಅನ್ನುವ ಒರಟಾದ ಆಡಳಿತ. ಇದರಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪ್ರಜೆಗಳು ಕಷ್ಟಪಡುತ್ತಿದ್ದಾರೆ. ಈ ಮಾತು ಎಲ್ಲಾ ಅಧಿಕಾರಿಗಳಲ್ಲಿ ನಿಜವಲ್ಲ. ಪ್ರಜೆಗಳಿಗೆ ಒಳ್ಳೇದಾಗಬೇಕೆಂದು ಹಾರೈಸುವ ಅಧಿಕಾರಿಗಳೂ ಇದ್ದಾರೆ. ಆದರೆ ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ತಮ್ಮೊಳಗೆ ಜಗಳ ಮಾಡಿಕೊಂಡು ಅಧಿಕಾರದ ಆಸೆಗಾಗಿ ಜನರ ಹಿತವನ್ನು ಮರೆತುಬಿಡುತ್ತಾರೆ. ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕಾಗಿ ಜನರಿಗೆ ಹಾನಿ ಮಾಡುತ್ತಿರುವುದೂ ಸುಳ್ಳಲ್ಲ. ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದು: “ಪ್ರಯತ್ನಗಳು ವಿಫಲವಾಗಿರುವ, ಬಯಕೆಗಳು ಈಡೇರದೆ ಮರೆಯಾದ ಕಥೆಯೇ ಇತಿಹಾಸ.”
ಬೈಬಲ್ ಸಹ ಹೇಳುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಮಾನವರೆಲ್ಲ ಅಪರಿಪೂರ್ಣರು. ಎಲ್ಲಾ ವಿಷಯದಲ್ಲಿ ಸಾಫಲ್ಯ ಪಡೆಯಲು ಬೇಕಾದ ವಿವೇಕ ಮತ್ತು ಮುಂದಾಲೋಚನೆಯ ಕೊರತೆ ಇರುವವರು. ತಮ್ಮತಮ್ಮ ಜೀವನವನ್ನೇ ಸರಿಯಾಗಿ ನಡೆಸಿಕೊಂಡು ಹೋಗಲು ಕಷ್ಟಪಡುವಾಗ ಜನತೆಯನ್ನು ಹೇಗೆ ತಾನೆ ಮುನ್ನಡೆಸಲು ಸಾಧ್ಯ? ಮನುಷ್ಯನ ಆಡಳಿತ ಯಾಕೆ ಕಷ್ಟವನ್ನು ಪೂರ್ತಿಯಾಗಿ ನಿವಾರಿಸಲು ಆಗುತ್ತಿಲ್ಲ ಅಂತ ನಮಗೆ ಈಗ ತಿಳೀತಲ್ಲವೇ. ಒಟ್ಟಾರೆ ಹೇಳಬೇಕೆಂದರೆ ಮಾನವ ಆಡಳಿತ ಅಥವಾ ಸರ್ಕಾರವೂ ಕಷ್ಟಗಳಿಗೆ ಒಂದು ಕಾರಣ!
ಕಪಟ ತುಂಬಿರುವ ಧರ್ಮಗಳು
“ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು ಯೇಸು.—ಯೋಹಾನ 13:35.
ಸಾಮಾನ್ಯ ಯಾವುದೇ ಧರ್ಮ ಅಥವಾ ಪಂಗಡಗಳಿರಲಿ ಅವು ಪ್ರೀತಿ ಐಕ್ಯತೆ ಬಗ್ಗೆ ಸಾರುತ್ತವೆ. ಆದರೆ ಅವನ್ನು ಪಾಲಿಸುವವರು ಮಾತ್ರ ಯಾರೂ ಇಲ್ಲ. ಪೂರ್ವಗ್ರಹವನ್ನು ಹೊಡೆದೋಡಿಸುವಂಥ ಪ್ರೀತಿಯನ್ನು ಬೇರೂರಿಸಲು ಇನ್ನೂ ಆಗಿಲ್ಲ. ಪ್ರೀತಿಯನ್ನು ಬೆಳೆಸುವ ಬದಲು ಧರ್ಮಗಳು ಒಡಕು, ಮತಾಂಧತೆ ಮತ್ತು ಜನರ ಮಧ್ಯೆ ಮಾತ್ರವಲ್ಲ ದೇಶ ದೇಶಗಳ ಮಧ್ಯೆ ಸಂಘರ್ಷವನ್ನು ಹುಟ್ಟುಹಾಕಿದೆ. “ಒಂದು ಸರ್ಕಾರ ದುರಭಿಮಾನದಿಂದ ಕ್ರೂರತೆಯಿಂದ ಕೂಡಿದೆ ಅಂದರೆ ಅದಕ್ಕೆ ಕಾರಣ ಅದು ಧರ್ಮದ ಪ್ರೇರಣೆ ಹೊಂದಿರುತ್ತದೆ” ಎಂದು ಕ್ರಿಶ್ಚಿಯಾನಿಟಿ ಆ್ಯಂಡ್ ದ ವರ್ಲ್ಡ್ ರಿಲಿಜನ್ ಎಂಬ ಪುಸ್ತಕದಲ್ಲಿ ಹ್ಯಾನ್ಸ್ ಕುಂಗ್ ಹೇಳಿದ್ದಾರೆ.
ಇದು ಸಾಲದೆಂದು ಅನೇಕ ಧರ್ಮಗಳ ಮುಖಂಡರು ಮದುವೆಯ ಮುಂಚೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಅಕ್ರಮ ಲೈಂಗಿಕ ಸಂಬಂಧಕ್ಕೆ ಮತ್ತು ಸಲಿಂಗಕಾಮದಂಥ ವಿಷಯಗಳಿಗೆ ಧಾರಾಳವಾಗಿ
ಒಪ್ಪಿಗೆ ಕೊಟ್ಟಿದ್ದಾರೆ. ಇದು ರೋಗ ಹರಡುವಿಕೆ, ಗರ್ಭಪಾತ, ಅನಪೇಕ್ಷಿತ ಗರ್ಭಧಾರಣೆ, ವಿವಾಹಗಳು ಮುರಿಯುವುದಕ್ಕೆ, ಕುಟುಂಬಗಳು ಒಡೆದು ಹೋಗುವುದಕ್ಕೆ ಕಾರಣವಾಗಿದೆ. ಹೀಗೆ, ಹೇಳಲಾಗದಷ್ಟು ನೋವು ಸಂಕಟಕ್ಕೆ ಬುನಾದಿ ಹಾಕಿದೆ.ಮಾನವ ಕುಂದುಕೊರತೆಗಳು ಮತ್ತು ಸ್ವಾರ್ಥ ಬಯಕೆಗಳು
“ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”—ಯಾಕೋಬ 1:14, 15.
ನಾವೆಲ್ಲರೂ ತಪ್ಪು ಮಾಡುವವರು. ಹುಟ್ಟಿದಾಗಿಂದಲೇ ಈ ಗುಣ ನಮ್ಮಲ್ಲಿದೆ. ಅದೂ ಅಲ್ಲದೆ ‘ಶರೀರ ಬಯಸುವಂಥ ವಿಷಯಗಳ’ ವಿರುದ್ಧ ಯಾವಾಗಲೂ ಹೋರಾಡುತ್ತಾ ಇರಬೇಕು. (ಎಫೆಸ 2:3) ನಮ್ಮಲ್ಲಿ ತಪ್ಪು ಆಶೆಗಳಿದ್ದು ಅದಕ್ಕೆ ಪುಷ್ಟಿ ನೀಡುವಂಥ ಸಂದರ್ಭ ಎದುರಾದರೆ ತಪ್ಪಿಸಿಕೊಳ್ಳುವುದು ಇನ್ನೂ ಕಷ್ಟ. ಅಕಸ್ಮಾತ್ ಅದಕ್ಕೆ ಬಲಿಯಾದರೆ ಪ್ರತಿಫಲ ಇನ್ನೂ ಭೀಕರವಾಗಿರುತ್ತದೆ.
ಲೇಖಕ ಪಿ.ಡಿ. ಮೆಹ್ತಾ ಬರೆದದ್ದು: “ನಾವು ಒಳಗಾಗುವ ಕಷ್ಟಕ್ಕೆ ಹೆಚ್ಚಿನಾಂಶ ನಮ್ಮಲ್ಲಿರುವ ಮಿತಿಮೀರಿದ ಬಯಕೆ, ತಡೆಹಿಡಿಯಲಾರದಷ್ಟು ಸುಖದ ವ್ಯಾಮೋಹ ಮತ್ತು ದುರಾಶೆ ಕಾರಣ.” ಕುಡಿಕತನ, ಮಾದಕ ವಸ್ತು ಸೇವನೆ, ಜೂಜು, ಕಾಮ ಇವುಗಳ ಮೋಹ ಅಥವಾ ಚಟ “ಗಣ್ಯ ವ್ಯಕ್ತಿ”ಗಳನ್ನು ಸಹ ಬಿಟ್ಟಿಲ್ಲ. ಇದರಿಂದ ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಸಹ ನೋವಾಗುತ್ತೆ. ಮನುಷ್ಯನ ಕುಂದುಕೊರತೆಗಳನ್ನು ಮನಸ್ಸಲ್ಲಿಟ್ಟು ನೋಡಿದರೆ ಬೈಬಲ್‌ನ ಈ ಮಾತು ನೂರಕ್ಕೆ ನೂರು ಸತ್ಯ: “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.”—ರೋಮನ್ನರಿಗೆ 8:22.
ಕೆಟ್ಟ ದೇವದೂತರು
ಸೈತಾನ “ಈ ಪ್ರಪಂಚದ ದೇವರು” ಎಂದು ಬೈಬಲ್ ಬಯಲುಪಡಿಸುತ್ತದೆ. ಅವನ ಜತೆಯಲ್ಲಿ ಬಲಿಷ್ಠ ಕೆಟ್ಟ ದೇವದೂತರ ಒಂದು ಹಿಂಡೇ ಇದೆ. ಇವುಗಳನ್ನು ದೆವ್ವಗಳು ಎಂದು ಬೈಬಲ್ ಕರೆಯುತ್ತದೆ.—2 ಕೊರಿಂಥ 4:4, ಸತ್ಯವೇದವು; ಪ್ರಕಟನೆ 12:9.
ಇವು ಸೈತಾನನ ಹಾಗೇ ಜನರನ್ನು ನಿಯಂತ್ರಿಸಿ ದಾರಿತಪ್ಪಿಸುವುದರಲ್ಲೇ ಮುಳುಗಿರುತ್ತವೆ. ಇದನ್ನು ಒಪ್ಪಿಕೊಳ್ಳುತ್ತಾ ಯೇಸುವಿನ ಅನುಯಾಯಿ ಪೌಲ ಹೇಳಿದ್ದು: “ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; ಸರಕಾರಗಳ ವಿರುದ್ಧವಾಗಿಯೂ ಅಧಿಕಾರಗಳ ವಿರುದ್ಧವಾಗಿಯೂ ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ [ಕೆಟ್ಟ ದೇವದೂತ] ಸೇನೆಗಳ ವಿರುದ್ಧವಾಗಿಯೂ ಇದೆ.”—ಎಫೆಸ 6:12.
ಮನುಷ್ಯರನ್ನು ಪೀಡಿಸುವುದೆಂದರೆ ದೆವ್ವಗಳಿಗೆ ತುಂಬ ಇಷ್ಟ. ಆದರೆ ಅದಲ್ಲ ಅವುಗಳ ಮುಖ್ಯ ಉದ್ದೇಶ. ಸರ್ವ ಉನ್ನತ ದೇವರಾದ ಯೆಹೋವನಿಂದ ಜನರನ್ನು ದೂರ ಮಾಡುವುದೇ ಅವುಗಳ ಆಸೆ. (ಕೀರ್ತನೆ 83:18) ಅದೇ ಅವಕ್ಕೆ ತೃಪ್ತಿ ನೀಡುವುದು. ಜೋತಿಷ್ಯ, ಮಾಟಮಂತ್ರ, ವಾಮಾಚಾರ, ಭವಿಷ್ಯ ಹೇಳುವುದು ಇಂಥ ತಂತ್ರಗಳಿಂದ ಜನರನ್ನು ಮೋಸಮಾಡಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿವೆ ಈ ದೆವ್ವಗಳು. ಆದ್ದರಿಂದಲೇ ಯೆಹೋವ ದೇವರು ನಮ್ಮನ್ನು ಅವುಗಳ ಬಗ್ಗೆ ಎಚ್ಚರಿಸುತ್ತಾನೆ ಮತ್ತು ಸೈತಾನನನ್ನು, ದೆವ್ವಗಳನ್ನು ದ್ವೇಷಿಸುವ ಜನರಿಗೆಲ್ಲ ಸಂರಕ್ಷಣೆ ಸಹ ಕೊಡುತ್ತಾನೆ.—ಯಾಕೋಬ 4:7.
ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ
ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆಯೇ ಬೈಬಲ್ ಹೀಗೆ ಭವಿಷ್ಯ ನುಡಿದಿತ್ತು: “ಆದರೆ ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು.”
ಕಠಿನಕಾಲಗಳಿಗೆ ಕಾರಣ ಏನು ಎಂದು ಮುಂದುವರಿಸುತ್ತಾ ಬೈಬಲ್ ಹೇಳುವುದು: “ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ . . . ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿರುತ್ತಾರೆ. ಇದೇ ತೋರಿಸುತ್ತೆ ನಾವು “ಕಡೇ ದಿವಸ”ಗಳಲ್ಲಿ ಜೀವಿಸುತ್ತಿದ್ದೀವಿ ಅಂತ.—2 ತಿಮೊಥೆಯ 3:1-4.
ಮನುಷ್ಯನಿಗೆ ಕಷ್ಟಗಳನ್ನು ನಿವಾರಿಸಬೇಕೆಂದು ಮನಸ್ಸಿದ್ದರೂ ಅದು ಅವನಿಂದ ಅಸಾಧ್ಯ ಎಂಬ ನಿಜತ್ವಕ್ಕೆ ನಾವು ನೋಡಿದ ಎಲ್ಲಾ ಅಂಶಗಳು ಕನ್ನಡಿ ಹಿಡಿಯಿತು. ಹಾಗಾದರೆ ಇದು ಸಾಧ್ಯವಾಗೋದಾದರೂ ಯಾರಿಂದ? ನಮ್ಮನ್ನು ಸೃಷ್ಟಿ ಮಾಡಿರುವ ದೇವರಿಗೆ ಇದು ಖಂಡಿತ ಸಾಧ್ಯ. “ಪಿಶಾಚನ ಕೆಲಸಗಳನ್ನು ಭಂಗ” ಮಾಡುತ್ತೇನೆಂದು ದೇವರು ನಮಗೆ ಮಾತು ಕೊಟ್ಟಿದ್ದಾನೆ. (1 ಯೋಹಾನ 3:8) ಕಷ್ಟಗಳಿಗೆ ಕಾರಣವಾಗಿರುವುದನ್ನು ತೆಗೆದು ಹಾಕಲು ದೇವರು ಏನು ಮಾಡುವನೆಂದು ಮುಂದಿನ ಲೇಖನ ತಿಳಿಸುತ್ತೆ. (w13-E 09/01)