ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 6

ಮಗುವಿನ ಆಗಮನ. . . ಬಲವಾಗಲಿ ನಿಮ್ಮ ಬಂಧನ

ಮಗುವಿನ ಆಗಮನ. . . ಬಲವಾಗಲಿ ನಿಮ್ಮ ಬಂಧನ

“ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು.”—ಕೀರ್ತನೆ 127:3

ಮೊದಲ ಬಾರಿ ನಿಮ್ಮ ಪುಟ್ಟ ಕಂದನನ್ನು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ನವಚೈತನ್ಯ ಮೂಡಿರಬಹುದು, ಪುಳಕಿತರಾಗಿ ನಿಮ್ಮ ಬಾಯಿಂದ ಮಾತೇ ಹೊರಡದೆ ಇದ್ದಿರಬಹುದು. ಆದರೆ ಆ ಚೈತನ್ಯ, ಸಂತೋಷ ಕ್ರಮೇಣ ಕುಂದಿಹೋಗುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಮುದ್ದು ಮಗುವಿನ ಪಾಲನೆ-ಪೋಷಣೆಯಲ್ಲೇ ನಿಮ್ಮ ಸಮಯ, ಶಕ್ತಿ ಎಲ್ಲವೂ ಕಳೆದುಹೋಗುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ನಿದ್ದೆಗೆಡುವುದರಿಂದ, ಭಾವನೆಗಳಲ್ಲಿ ಏರುಪೇರಾಗುವುದರಿಂದ ನಿಮ್ಮಿಬ್ಬರ ಮಧ್ಯೆ ದೊಡ್ಡ ಬಿರುಕು ಉಂಟಾಗಬಹುದು. ಆದ್ದರಿಂದ ನಿಮ್ಮ ಮಗುವಿನ ಪಾಲನೆ-ಪೋಷಣೆ ಮಾಡಲು ಮತ್ತು ಅದೇ ಸಮಯದಲ್ಲಿ, ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ನೀವಿಬ್ಬರೂ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ಇದನ್ನು ಮಾಡಲು ನಿಮ್ಮಿಬ್ಬರಿಗೂ ನೆರವಾಗುವ ಬೈಬಲ್‌ ತತ್ವಗಳನ್ನು ಈಗ ಪರಿಶೀಲಿಸೋಣ.

1 ಶಿಶುವಿನಿಂದಾಗುವ ಪರಿಣಾಮ

ಬೈಬಲಿನ ಹಿತವಚನ: “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ” ಮತ್ತು ಅದು “ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ.” (1 ಕೊರಿಂಥ 13:4, 5) ತಾಯಿಯಾದ ನಿಮಗೆ ನಿಮ್ಮ ಮಗುವೇ ಸರ್ವಸ್ವ ಆಗಿರುವುದು ಸಹಜ. ಆದರೆ ನಿಮ್ಮ ಗಂಡ ನೀವು ಆತನನ್ನು ಕಡೆಗಣಿಸುತ್ತಿದ್ದೀರ ಎಂದು ಅನಿಸಬಹುದು. ಆದ್ದರಿಂದ ನಿಮ್ಮ ಗಂಡನಿಗೂ ನಿಮ್ಮ ಪ್ರೀತಿಯ ಅವಶ್ಯಕತೆ ಇದೆ ಎನ್ನುವುದನ್ನು ಮರೆಯಬೇಡಿ. ತಾಳ್ಮೆ ಮತ್ತು ದಯೆಯಿಂದ ವರ್ತಿಸುವ ಮೂಲಕ ನಿಮಗೂ ನಿಮ್ಮ ಮಗುವಿನ ಆರೈಕೆಗೂ ನಿಮ್ಮ ಸಂಗಾತಿಯ ಅಗತ್ಯವಿದೆ ಎಂದು ತೋರಿಸಿ.

“ಗಂಡಂದಿರೇ, . . . ಅವರೊಂದಿಗೆ ಜ್ಞಾನಾನುಸಾರವಾಗಿ ಬಾಳುವೆ ಮಾಡಿರಿ.” (1 ಪೇತ್ರ 3:7) ನಿಮ್ಮ ಮಗುವಿನ ಆರೈಕೆಯಲ್ಲಿ ನಿಮ್ಮ ಪತ್ನಿ ತನ್ನ ಸಂಪೂರ್ಣ ಶಕ್ತಿಯನ್ನು ಧಾರೆಯೆರೆಯುತ್ತಾಳೆಂದು ಅರ್ಥಮಾಡಿಕೊಳ್ಳಿ. ಆಕೆ ತನಗಿರುವ ಜವಾಬ್ದಾರಿಯಿಂದಾಗಿ ಒತ್ತಡದಲ್ಲಿರಬಹುದು, ನಿತ್ರಾಣಳಾಗಿರಬಹುದು ಅಥವಾ ಖಿನ್ನತೆಯೂ ಅವಳನ್ನು ಕಾಡುತ್ತಿರಬಹುದು. ಇದರ ಪರಿಣಾಮವಾಗಿ ಕೆಲವೊಮ್ಮೆ ನಿಮ್ಮ ಮೇಲೂ ರೇಗಾಡಬಹುದು. ಆದರೆ ನೀವು ಆಗ ತಾಳ್ಮೆಗೆಡದೆ ಶಾಂತವಾಗಿರಿ. ಏಕೆಂದರೆ, “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 16:32) ವಿವೇಕಿಗಳಾಗಿರಿ, ನಿಮ್ಮ ಪತ್ನಿಗೆ ಬೇಕಾದ ಬೆಂಬಲ ನೀಡಿ.—ಜ್ಞಾನೋಕ್ತಿ 14:29.

ಹೀಗೆ ಮಾಡಿ:

  • ಅಪ್ಪಂದಿರೇ, ನಿಮ್ಮ ಹೆಂಡತಿಗೂ ಸಾಕಷ್ಟು ವಿಶ್ರಾಂತಿಯ ಅವಶ್ಯಕತೆಯಿದೆ. ಹಾಗಾಗಿ, ನಿಮ್ಮ ಮಗುವಿನ ಆರೈಕೆಯಲ್ಲಿ ಆಕೆಗೆ ಸಹಾಯಮಾಡಿ. ರಾತ್ರಿಯಲ್ಲಿ ಮಗು ಎಚ್ಚರವಾದರೆ ನೀವು ಕೆಲವೊಮ್ಮೆ ಮಗುವನ್ನು ನೋಡಿಕೊಳ್ಳಿ. ಬೇರೆ ಕೆಲಸಗಳಿಗಾಗಿ ಕೊಡುವ ಸಮಯವನ್ನು ಕಡಿಮೆ ಮಾಡಿ ಆ ಸಮಯವನ್ನು ನಿಮ್ಮ ಹೆಂಡತಿ, ಮಗುವಿಗಾಗಿ ಬದಿಗಿರಿಸಿ

  • ಅಮ್ಮಂದಿರೇ, ನಿಮ್ಮ ಮಗುವಿನ ಆರೈಕೆಯಲ್ಲಿ ನೆರವು ನೀಡಲು ನಿಮ್ಮ ಪತಿ ಮುಂದಾದಾಗ ಅವರ ಸಹಾಯವನ್ನು ಸ್ವೀಕರಿಸಿ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ಬಾರದಿದ್ದರೆ ಅವರನ್ನು ಟೀಕಿಸಬೇಡಿ. ಬದಲಿಗೆ ಹೇಗೆ ನೋಡಿಕೊಳ್ಳಬೇಕು ಎಂದು ಸಮಾಧಾನದಿಂದ ತೋರಿಸಿಕೊಡಿ

2 ನಿಮ್ಮ ಬಂಧವನ್ನು ಬಲಗೊಳಿಸಿ

ಬೈಬಲಿನ ಹಿತವಚನ: “ಅವರಿಬ್ಬರು ಒಂದೇ ಶರೀರವಾಗಿರುವರು.” (ಆದಿಕಾಂಡ 2:24) ನಿಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಪುಟ್ಟ ಅತಿಥಿ ಆಗಮಿಸಿರುವುದೇನೋ ನಿಜ. ಆದರೆ ಸತಿಪತಿಗಳಾದ ನೀವು ಈಗಲೂ ‘ಒಂದೇ ಶರೀರವಾಗಿದ್ದೀರಿ’. ಆದ್ದರಿಂದ ನಿಮ್ಮ ಬಂಧವನ್ನು ಬಲಗೊಳಿಸಲು ಶತಪ್ರಯತ್ನ ಮಾಡಿ.

ಹೆಂಡತಿಯರೇ, ನಿಮ್ಮ ಗಂಡನ ಸಹಾಯ, ಸಹಕಾರಕ್ಕೆ ಕೃತಜ್ಞರಾಗಿರಿ. ನೀವಾಡುವ ಮೆಚ್ಚುಗೆಯ ಮಾತು ‘ಮದ್ದಾಗಿರಬಲ್ಲದು’. (ಜ್ಞಾನೋಕ್ತಿ 12:18) ಗಂಡಂದಿರೇ, ನೀವು ನಿಮ್ಮ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತೀರ, ಮಾನ್ಯ ಮಾಡುತ್ತೀರ ಅನ್ನೋದನ್ನು ಆಕೆಗೆ ಹೇಳಿ. ನಿಮ್ಮ ಕುಟುಂಬಕ್ಕಾಗಿ ಆಕೆ ಪಡುತ್ತಿರುವ ಪ್ರಯಾಸವನ್ನು ಶ್ಲಾಘಿಸಿ.—ಜ್ಞಾನೋಕ್ತಿ 31:10, 28.

“ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ.” (1 ಕೊರಿಂಥ 10:24) ನಿಮ್ಮ ಸಂಗಾತಿಗೆ ಖುಷಿ ತರುವ ವಿಷಯಗಳನ್ನೇ ಮಾಡಿ. ಇಬ್ಬರೂ ಮಾತಾಡಲು ಸಮಯ ಮಾಡಿಕೊಳ್ಳಿ, ಪರಸ್ಪರ ಪ್ರಶಂಸಿಸಿ ಮತ್ತು ಒಬ್ಬರು ಮಾತಾಡುವಾಗ ಇನ್ನೊಬ್ಬರು ಕಿವಿಗೊಡಿ. ಲೈಂಗಿಕ ವಿಷಯದಲ್ಲಿ ಸ್ವಹಿತವನ್ನು ಮಾತ್ರ ನೋಡದೆ ನಿಮ್ಮ ಸಂಗಾತಿಯ ಬೇಕು-ಬೇಡಗಳನ್ನೂ ಪರಿಗಣಿಸಿ. “ಪರಸ್ಪರ ಸಮ್ಮತಿಯಿಂದ” ಮಾತ್ರವೇ ದಂಪತಿ ಲೈಂಗಿಕ ಸಂಬಂಧದಿಂದ ದೂರವಿರಬಹುದೆಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 7:3-5) ನೀವಿಬ್ಬರೂ ಇದರ ಬಗ್ಗೆ ಮನಬಿಚ್ಚಿ ಮಾತಾಡಿ. ನೀವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ತಾಳ್ಮೆ ತೋರಿಸುವಾಗ ನಿಮ್ಮ ಬಂಧ ಬಲಗೊಳ್ಳುತ್ತದೆ.

ಹೀಗೆ ಮಾಡಿ:

  • ನೀವಿಬ್ಬರೇ ಕೂತು ಮಾತಾಡಲು ಸಮಯ ಮಾಡಿಕೊಳ್ಳಿ

  • ನಿಮ್ಮ ಸಂಗಾತಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿ. ಉದಾಹರಣೆಗೆ, ಪ್ರೀತಿಯ ಮಾತುಗಳಿರುವ ಒಂದು ಸಣ್ಣ ಸಂದೇಶವನ್ನೋ ಅಥವಾ ಚಿಕ್ಕಪುಟ್ಟ ಉಡುಗೊರೆಗಳನ್ನೋ ಕೊಡಬಹುದು

3 ಶಿಶುವಿಗೆ ಶಿಕ್ಷಣ

ಬೈಬಲಿನ ಹಿತವಚನ: ‘ಚಿಕ್ಕಂದಿನಿಂದಲೇ ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ; ಇವು ನಿನ್ನನ್ನು . . . ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು.’ (2 ತಿಮೊಥೆಯ 3:15) ನಿಮ್ಮ ಶಿಶುವಿಗೆ ಹೇಗೆ ಬೋಧಿಸಬೇಕೆಂದು ಮೊದಲೇ ಯೋಜಿಸಿ. ಏಕೆಂದರೆ ಹುಟ್ಟುವ ಮುಂಚೆಯೇ ಅದಕ್ಕೆ ಕಲಿಯುವ ಸಾಮರ್ಥ್ಯವಿರುತ್ತದೆ. ಗರ್ಭದಲ್ಲಿರುವಾಗಲೇ ನಿಮ್ಮ ಧ್ವನಿಯನ್ನು ಗುರುತಿಸುತ್ತದೆ, ನಿಮ್ಮ ಭಾವನೆಗಳಿಗೂ ಪ್ರತಿಕ್ರಿಯಿಸುತ್ತದೆ. ಹಾಗಾಗಿ, ನಿಮ್ಮ ಮಗುವಿನ ಮುಂದೆ ಓದಿ. ಮಗುವಿಗೆ ಅರ್ಥ ಆಗಲ್ಲವಲ್ಲಾ ಎಂದು ಸುಮ್ಮನಿರಬೇಡಿ. ಏಕೆಂದರೆ ನೀವು ಓದುವುದರಿಂದ ನಿಮ್ಮ ಮಗು ಬೆಳೆಯುತ್ತಾ ಹೋದಂತೆ ಓದುವುದರಲ್ಲಿ ಆನಂದಿಸುತ್ತದೆ.

‘ದೇವರ ಬಗ್ಗೆ ಕಲಿಯಲು ನನ್‌ ಮಗು ಇನ್ನೂ ಚಿಕ್ಕದು’ ಅಂತ ಎಂದಿಗೂ ನೆನೆಸಬೇಡಿ. ಬದಲಿಗೆ ಮಗುವಿನೊಂದಿಗೆ ದೇವರ ಬಗ್ಗೆ ಮಾತಾಡುತ್ತಾ ಇರಿ. ನೀವು ದೇವರಿಗೆ ಪ್ರಾರ್ಥಿಸುವಾಗ ಮಗುವೂ ನಿಮ್ಮ ಜೊತೆಯಿರಲಿ. (ಧರ್ಮೋಪದೇಶಕಾಂಡ 11:19) ನೀವು ಅದರ ಜೊತೆ ಆಟವಾಡುವಾಗ ಸಹ ದೇವರ ಸೃಷ್ಟಿಯ ಬಗ್ಗೆ ತಿಳಿಸಿ. (ಕೀರ್ತನೆ 78:3, 4) ನಿಮ್ಮ ಮಗು ಬೆಳೆಯುತ್ತಾ ಹೋದಂತೆ ಯೆಹೋವನ ಕಡೆಗಿನ ನಿಮ್ಮ ಪ್ರೀತಿಯನ್ನು ಗ್ರಹಿಸಿ ತಾನು ಸಹ ಯೆಹೋವನನ್ನು ಪ್ರೀತಿಸಲು ಕಲಿಯುವುದು.

ಹೀಗೆ ಮಾಡಿ:

  • ನಿಮ್ಮ ಪ್ರಾರ್ಥನೆಯಲ್ಲಿ ನಿರ್ದಿಷ್ಟವಾಗಿ, ಮಗುವಿಗೆ ತರಬೇತಿ ಕೊಡಲು ಬೇಕಾದ ವಿವೇಕಕ್ಕಾಗಿ ಕೇಳಿಕೊಳ್ಳಿ

  • ಕೆಲವೊಂದು ಮುಖ್ಯ ಪದಗಳನ್ನು ಮತ್ತು ವಿಷಯಗಳನ್ನು ಪದೇ ಪದೇ ಹೇಳುತ್ತಿರಿ. ಆಗ ನಿಮ್ಮ ಮಗು ಅವುಗಳನ್ನು ಬೇಗನೆ ಕಲಿತುಕೊಳ್ಳುತ್ತದೆ