ಗಲಾತ್ಯದವರಿಗೆ ಬರೆದ ಪತ್ರ 3:1-29

  • ನಂಬಿಕೆಗೂ ನಿಯಮ ಪುಸ್ತಕ ಪಾಲಿಸೋದಕ್ಕೂ ವ್ಯತ್ಯಾಸ (1-14)

    • ನೀತಿವಂತರು ನಂಬಿಕೆಯಿಂದ ಬದುಕ್ತಾರೆ (11)

  • ಅಬ್ರಹಾಮನಿಗೆ ಕೊಟ್ಟ ಮಾತು ನಿಯಮಗಳ ಆಧಾರದಿಂದ ಅಲ್ಲ (15-18)

    • ಕ್ರಿಸ್ತ ಅಬ್ರಹಾಮನ ಸಂತಾನ (16)

  • ನಿಯಮ ಪುಸ್ತಕದ ಆರಂಭ, ಉದ್ದೇಶ (19-25)

  • ನಂಬಿಕೆಯ ಮೂಲಕ ದೇವರ ಮಕ್ಕಳು (26-29)

    • ಕ್ರಿಸ್ತನಿಗೆ ಸೇರಿದವರು ಅಬ್ರಹಾಮನ ಸಂತತಿ (29)

3  ಬುದ್ಧಿಯಿಲ್ಲದ ಗಲಾತ್ಯದವ್ರೇ, ನಿಮಗೆ ಮೋಸ ಮಾಡಿದ್ದು ಯಾರು?+ ಯೇಸು ಕ್ರಿಸ್ತನನ್ನ ಮರದ ಕಂಬಕ್ಕೆ ಮೊಳೆಗಳಿಂದ ಜಡಿದಿದ್ದನ್ನ ನಾವು ಮುಂಚೆನೇ ನಿಮ್ಮ ಕಣ್ಣಿಗೆ ಕಟ್ಟೋ ಹಾಗೆ ವರ್ಣಿಸಿದ್ವಿ ತಾನೇ?+  ನನಗೊಂದು ವಿಷ್ಯ ಹೇಳಿ, ನೀವು ಪವಿತ್ರಶಕ್ತಿ ಪಡ್ಕೊಂಡಿದ್ದು ಹೇಗೆ? ನಿಯಮ ಪುಸ್ತಕ ಹೇಳೋದನ್ನ ಪಾಲಿಸಿದ್ರಿಂದನಾ? ನೀವು ಕೇಳಿಸ್ಕೊಂಡ ಸಿಹಿಸುದ್ದಿಯಲ್ಲಿ ನಂಬಿಕೆ ಇಟ್ಟಿದ್ರಿಂದನಾ?+  ನಿಮಗೆ ಅಷ್ಟೂ ಬುದ್ಧಿ ಇಲ್ವಾ? ನೀವು ಪವಿತ್ರಶಕ್ತಿಗೆ ತಕ್ಕ ಹಾಗೆ ನಡೀತಾ ಶುರುಮಾಡಿದ ಹೊಸ ಜೀವನವನ್ನ ಮನುಷ್ಯನ ಪಾಪದ ಸ್ವಭಾವಕ್ಕೆ ತಕ್ಕ ಹಾಗೆ ನಡಿದು ಮುಗಿಸಬೇಕು ಅಂತಿದ್ದೀರಾ?+  ನೀವು ಇಷ್ಟೆಲ್ಲ ಕಷ್ಟಪಟ್ಟಿದ್ದು ವ್ಯರ್ಥನಾ? ನಿಜವಾಗ್ಲೂ ವ್ಯರ್ಥ ಅಲ್ಲ.  ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮ ಮಧ್ಯ ಅದ್ಭುತಗಳನ್ನ ನಡಿಸುವವನು ಯಾಕೆ ಅದನ್ನೆಲ್ಲ ಮಾಡ್ತಾನೆ?+ ನಿಯಮ ಪುಸ್ತಕ ಹೇಳೋದನ್ನ ನೀವು ಪಾಲಿಸಿದ್ರಿಂದನಾ? ಅಥವಾ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಲ್ಲಿ ನಂಬಿಕೆ ಇಟ್ಟಿದ್ರಿಂದನಾ?  ಅಬ್ರಹಾಮ “ಯೆಹೋವನ* ಮೇಲೆ ನಂಬಿಕೆಯಿಟ್ಟ. ಹಾಗಾಗಿ ದೇವರ ದೃಷ್ಟಿಯಲ್ಲಿ ಅವನು ನೀತಿವಂತನಾಗಿದ್ದ”+ ಅಲ್ವಾ?  ನಂಬಿಕೆಯಿಂದ ಜೀವಿಸುವವರು ಅಬ್ರಹಾಮನ ಮಕ್ಕಳು ಅಂತ ನಿಮಗೆ ಪಕ್ಕಾ ಗೊತ್ತಿದೆ.+  ನಂಬಿಕೆ ಇರೋ ಬೇರೆ ಜನಾಂಗದ ಜನ್ರನ್ನೂ ನೀತಿವಂತರಾಗಿ ನೋಡ್ತೀನಿ ಅಂತ ದೇವರು ಪವಿತ್ರ ಗ್ರಂಥದಲ್ಲಿ ತುಂಬ ಮುಂಚೆನೇ ಹೇಳಿದನು. ಹಾಗಾಗಿ ಅಬ್ರಹಾಮನಿಗೆ “ನಿನ್ನ ಮೂಲಕ ಎಲ್ಲ ಜನ್ರು ಆಶೀರ್ವಾದ ಪಡ್ಕೊಳ್ತಾರೆ” ಅನ್ನೋ ಸಿಹಿಸುದ್ದಿ ಮೊದ್ಲೇ ಹೇಳಿದನು.+  ಅದಕ್ಕೇ ನಂಬಿಕೆಯಿಂದ ಜೀವಿಸುವವರು ನಂಬಿಕೆಯಿದ್ದ ಅಬ್ರಹಾಮನ ತರ ಆಶೀರ್ವಾದ ಪಡ್ಕೊಳ್ತಿದ್ದಾರೆ.+ 10  ನಿಯಮ ಪುಸ್ತಕದ ಮೇಲೆ ಮಾತ್ರ ಭರವಸೆ ಇಡುವವ್ರಿಗೆ ಶಾಪ ಸಿಗುತ್ತೆ. ಯಾಕಂದ್ರೆ “ನಿಯಮ ಪುಸ್ತಕದಲ್ಲಿ ಬರೆದಿರೋ ಎಲ್ಲ ಮಾತುಗಳನ್ನ ಪಾಲಿಸದ ಪ್ರತಿಯೊಬ್ರಿಗೂ ಶಾಪ ತಟ್ಲಿ” ಅಂತ ಬರೆದಿದೆ.+ 11  ಅಷ್ಟೇ ಅಲ್ಲ ನಿಯಮ ಪುಸ್ತಕ ಪಾಲಿಸೋದ್ರಿಂದ ಯಾರನ್ನೂ ದೇವರು ನೀತಿವಂತರಾಗಿ ನೋಡಲ್ಲ ಅನ್ನೋದು ಸ್ಪಷ್ಟ.+ ಯಾಕಂದ್ರೆ “ನೀತಿವಂತ ತನಗಿರೋ ನಂಬಿಕೆಯಿಂದ ಜೀವಿಸ್ತಾನೆ.”+ 12  ನಂಬಿಕೆ ಮುಖ್ಯ ಅಂತ ನಿಯಮ ಪುಸ್ತಕ ಹೇಳಲ್ಲ, ಆದ್ರೆ “ಇವನ್ನ ಪಾಲಿಸುವವನು ಬದುಕ್ತಾನೆ” ಅಂತ ಹೇಳುತ್ತೆ.+ 13  “ಕಂಬಕ್ಕೆ ತೂಗುಹಾಕಿದ ಪ್ರತಿಯೊಬ್ರ ಮೇಲೂ ಶಾಪ ಇದೆ”+ ಅಂತ ಗ್ರಂಥದಲ್ಲಿ ಬರೆದಿದೆ. ನಮ್ಮ ಬದ್ಲು ಕ್ರಿಸ್ತ ಶಾಪ ತಗೊಂಡು ನಮ್ಮನ್ನ ನಿಯಮ ಪುಸ್ತಕದ ಶಾಪದಿಂದ ಬಿಡಿಸಿದನು.+ ಹೀಗೆ ನಮ್ಮನ್ನ ಕೊಂಡ್ಕೊಂಡನು.+ 14  ಇದಕ್ಕೆ ಕಾರಣ, ಅಬ್ರಹಾಮನಿಗೆ ಕೊಟ್ಟ ಆಶೀರ್ವಾದ ಕ್ರಿಸ್ತ ಯೇಸುವಿನ ಮೂಲಕ ಬೇರೆ ಜನಾಂಗಗಳಿಗೆ ಸಿಗಬೇಕು+ ಮತ್ತು ಕೊಟ್ಟ ಮಾತಿನ ಹಾಗೆ ನಾವು ನಮ್ಮ ನಂಬಿಕೆಯ ಮೂಲಕ ಪವಿತ್ರಶಕ್ತಿಯನ್ನ ಪಡಿಬೇಕು ಅನ್ನೋದೇ.+ 15  ಸಹೋದರರೇ, ನಮ್ಮೆಲ್ರಿಗೂ ಗೊತ್ತಿರೋ ಒಂದು ಉದಾಹರಣೆ ಹೇಳ್ತೀನಿ, ಒಬ್ಬನು ಒಂದು ಒಪ್ಪಂದ ಮಾಡ್ಕೊಂಡ ಮೇಲೆ ಅದನ್ನ ರದ್ದು ಮಾಡೋಕೆ ಅಥವಾ ಅದಕ್ಕೆ ಏನಾದ್ರೂ ಕೂಡಿಸೋಕೆ ಯಾರಿಂದಾನೂ ಆಗಲ್ಲ. 16  ಅಬ್ರಹಾಮ ಮತ್ತು ಅವನ ಸಂತಾನಕ್ಕೆ ದೇವರು ಮಾತು ಕೊಟ್ಟನು.+ ಪವಿತ್ರ ಗ್ರಂಥ “ನಿನ್ನ ಸಂತತಿಯವರಿಗೆ” ಅಂತ ಹೇಳಿ ತುಂಬ ಜನ್ರ ಬಗ್ಗೆ ಹೇಳದೆ “ನಿನ್ನ ಸಂತಾನಕ್ಕೆ” ಅಂತ ಹೇಳಿ ಒಬ್ಬನ ಬಗ್ಗೆನೇ ಹೇಳ್ತು. ಆ ಸಂತಾನ ಕ್ರಿಸ್ತನೇ.+ 17  ನಾನು ಹೇಳೋದು ಏನಂದ್ರೆ, ದೇವರು ಮೊದ್ಲೇ ಮಾಡಿದ ಒಪ್ಪಂದವನ್ನ 430 ವರ್ಷಗಳಾದ ಮೇಲೆ+ ಬಂದ ನಿಯಮ ಪುಸ್ತಕ ರದ್ದು ಮಾಡಲ್ಲ, ಕೊನೆ ಮಾಡೋದೂ ಇಲ್ಲ. 18  ದೇವರು ಕೊಡೋ ಆಸ್ತಿ ನಿಯಮ ಪುಸ್ತಕ ಪಾಲಿಸೋದ್ರಿಂದ ಸಿಗೋದಾದ್ರೆ ಅದು ಆತನು ಕೊಟ್ಟ ಮಾತಿಂದ ಸಿಗಲ್ಲ ಅಂತಾಗುತ್ತೆ. ಆದ್ರೆ ದೇವರು ಅಬ್ರಹಾಮನಿಗೆ ದಯೆ ತೋರಿಸಿ ಆಸ್ತಿ ಕೊಟ್ಟಿದ್ದು ಮಾತು ಕೊಟ್ಟಿದ್ರಿಂದಾನೇ.+ 19  ಹಾಗಾದ್ರೆ ದೇವರು ಯಾಕೆ ನಿಯಮ ಪುಸ್ತಕ ಕೊಟ್ಟನು? ಯಾರಿಗೆ ಮಾತು ಕೊಟ್ಟಿದ್ನೋ ಆ ಸಂತಾನ ಬರೋ ತನಕ+ ಜನ್ರ ಪಾಪಗಳನ್ನ ತೋರಿಸೋಕೆ+ ದೇವರು ನಿಯಮ ಪುಸ್ತಕ ಕೊಟ್ಟನು. ದೇವರು ಆ ನಿಯಮ ಪುಸ್ತಕನ ದೇವದೂತರ+ ಮೂಲಕ ಮಧ್ಯಸ್ಥನ+ ಕೈಯಿಂದ ದಾಟಿಸಿದನು. 20  ಒಂದು ಒಪ್ಪಂದದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಇದ್ರೆ ಅದಕ್ಕೆ ಮಧ್ಯಸ್ಥ ಬೇಡ. ಈ ಒಪ್ಪಂದ ಮಾಡಿದ್ದು ಒಬ್ಬನೇ, ಆತನು ದೇವರೇ. 21  ಹಾಗಾದ್ರೆ ನಿಯಮ ಪುಸ್ತಕ ದೇವರು ಕೊಟ್ಟ ಮಾತುಗಳಿಗೆ ವಿರುದ್ಧವಾಗಿ ಇದ್ಯಾ? ನಿಜವಾಗ್ಲೂ ಇಲ್ಲ! ಜೀವ ಪಡಿಯೋಕೆ ಅಂತ ಒಂದು ನಿಯಮ ಕೊಟ್ಟಿದ್ರೆ ಅದ್ರಿಂದ ನಾವು ನೀತಿವಂತರಾಗೋಕೆ ಆಗ್ತಿತ್ತು. 22  ಆದ್ರೆ ಜನರು ಪಾಪಕ್ಕೆ ಗುಲಾಮರಾಗಿದ್ದಾರೆ ಅಂತ ಪವಿತ್ರ ಗ್ರಂಥ ತೋರಿಸ್ತು. ಇದ್ರಿಂದ ಈ ಮುಂಚೆ ಮಾತು ಕೊಟ್ಟ ಹಾಗೆ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋರಿಗೆ ಸಿಗಬೇಕಾದ ಆಶೀರ್ವಾದನ ಆತನಲ್ಲಿ ನಂಬಿಕೆ ಇರೋರು ಪಡ್ಕೊಳ್ಳೋಕೆ ಆಗುತ್ತೆ. 23  ಆದ್ರೆ ನಾವು ಕ್ರಿಸ್ತನಲ್ಲಿ ನಂಬಿಕೆ ಇಡೋದಕ್ಕಿಂತ ಮುಂಚೆ ನಿಯಮ ಪುಸ್ತಕ ನಮ್ಮನ್ನ ಕಾಪಾಡ್ತಿತ್ತು. ಆಗ ನಾವು ಅದ್ರ ಕೈಕೆಳಗೆ ಬಂದ್ವಿ ಮತ್ತು ನಾವು ಆ ನಂಬಿಕೆ ಕೆಳಗೆ ಬರೋ ತನಕ ಕಾಯ್ತಾ ಇದ್ವಿ.+ 24  ಹೀಗೆ ನಿಯಮ ಪುಸ್ತಕ ಕ್ರಿಸ್ತನ ಹತ್ರ ನಮ್ಮನ್ನ ಕರ್ಕೊಂಡು ಹೋಗೋ ಸಂರಕ್ಷಕ* ಆಯ್ತು.+ ಇದ್ರಿಂದ ದೇವರು ನಮ್ಮ ನಂಬಿಕೆಯ ಮೂಲಕ ನಮ್ಮನ್ನ ನೀತಿವಂತರಾಗಿ ನೋಡ್ತಾನೆ.+ 25  ಆದ್ರೆ ಈಗ ನಾವು ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರೋದ್ರಿಂದ+ ಆ ಸಂರಕ್ಷಕನ* ಕೈಕೆಳಗಿಲ್ಲ.+ 26  ನಿಜ ಏನಂದ್ರೆ, ನೀವೆಲ್ಲ ಕ್ರಿಸ್ತ ಯೇಸು ಮೇಲೆ ನಂಬಿಕೆ ಇಟ್ಟಿರೋದ್ರಿಂದ+ ದೇವರ ಮಕ್ಕಳಾಗಿದ್ದೀರ.+ 27  ಕ್ರಿಸ್ತನ ಜೊತೆ ಒಂದಾಗಿರೋಕೆ ದೀಕ್ಷಾಸ್ನಾನ ಆಗಿರೋ ನೀವೆಲ್ಲ ಕ್ರಿಸ್ತನ ತರ ಆಗಿದ್ದೀರ.*+ 28  ಇನ್ಮುಂದೆ ನಿಮ್ಮಲ್ಲಿ ಯೆಹೂದ್ಯ-ಗ್ರೀಕ,+ ದಾಸ-ಸ್ವತಂತ್ರ,+ ಗಂಡು-ಹೆಣ್ಣು+ ಅನ್ನೋ ಭೇದಭಾವ ಇಲ್ಲ. ಯಾಕಂದ್ರೆ ಕ್ರಿಸ್ತ ಯೇಸುವಿನ ಶಿಷ್ಯರಾಗಿ ನೀವೆಲ್ಲ ಒಂದಾಗಿದ್ದೀರ.+ 29  ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ+ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ+ ಆಸ್ತಿ ಪಡ್ಕೊಳ್ತೀರ.+

ಪಾದಟಿಪ್ಪಣಿ

ಅಥವಾ “ಪಾಲಕ.”
ಅಥವಾ “ಪಾಲಕನ.”
ಅಥವಾ “ಕ್ರಿಸ್ತನನ್ನ ಧರಿಸ್ಕೊಂಡಿದ್ದೀರ.”