ಜ್ಞಾನೋಕ್ತಿ 15:1-33

  • ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ (1)

  • ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ (3)

  • ನೀತಿವಂತನ ಪ್ರಾರ್ಥನೆಯನ್ನ ದೇವರು ಖುಷಿಯಿಂದ ಕೇಳ್ತಾನೆ (8)

  • ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ (22)

  • ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡು (28)

15  ಮೃದುವಾದ* ಉತ್ತರ ಕೋಪ ಕಡಿಮೆ ಮಾಡುತ್ತೆ,+ಒರಟಾದ* ಮಾತು ಕೋಪ ಬರಿಸುತ್ತೆ.+   ವಿವೇಕಿಯ ನಾಲಿಗೆ ಜ್ಞಾನವನ್ನ ಒಳ್ಳೇ ರೀತಿಯಲ್ಲಿ ಉಪಯೋಗಿಸುತ್ತೆ,+ದಡ್ಡನ ಬಾಯಿ ಮೂರ್ಖತನವನ್ನ ತಟ್ಟಂತ ಒದರಿಬಿಡುತ್ತೆ.   ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ,ಆತನು ಒಳ್ಳೆಯವ್ರನ್ನ, ಕೆಟ್ಟವ್ರನ್ನ ನೋಡ್ತಾ ಇರ್ತಾನೆ.+   ಶಾಂತವಾಗಿರೋ ನಾಲಿಗೆ* ಸಾಂತ್ವನ ಕೊಡುತ್ತೆ,*+ತಿರುಚಿದ ಮಾತು ಮನಸ್ಸನ್ನ ಜಜ್ಜಿಹಾಕುತ್ತೆ.   ಮೂರ್ಖ ತನ್ನ ಅಪ್ಪ ಕೊಡೋ ಶಿಸ್ತನ್ನ ಕೀಳಾಗಿ ನೋಡ್ತಾನೆ,+ಆದ್ರೆ ಬೇರೆಯವರು ತಿದ್ದುವಾಗ ಜಾಣ ಸ್ವೀಕರಿಸ್ತಾನೆ.+   ನೀತಿವಂತನ ಮನೇಲಿ ತುಂಬ ಆಸ್ತಿಪಾಸ್ತಿ ಇರುತ್ತೆ,ಕೆಟ್ಟವನ ಆದಾಯ* ಅವನಿಗೆ ತೊಂದ್ರೆ ತಂದಿಡುತ್ತೆ.+   ವಿವೇಕಿಯ ತುಟಿಗಳು ಜ್ಞಾನವನ್ನ ಹಬ್ಬಿಸುತ್ತೆ,+ಆದ್ರೆ ದಡ್ಡನ ಹೃದಯ ಹಾಗೆ ಮಾಡಲ್ಲ.+   ಕೆಟ್ಟವನ ಬಲಿಯನ್ನ ಯೆಹೋವ ಸ್ವೀಕರಿಸಲ್ಲ,+ನೀತಿವಂತನ ಪ್ರಾರ್ಥನೆಯನ್ನ ಖುಷಿಯಿಂದ ಕೇಳ್ತಾನೆ.+   ಕೆಟ್ಟವನ ದಾರಿ ಯೆಹೋವನಿಗೆ ಅಸಹ್ಯ,+ನೀತಿಯಿಂದ ನಡ್ಕೊಳ್ಳೋ ವ್ಯಕ್ತಿ ಕಂಡ್ರೆ ಆತನಿಗೆ ಪ್ರೀತಿ.+ 10  ಒಳ್ಳೇ ದಾರಿಯನ್ನ ಬಿಟ್ಟುಬಿಡುವವನಿಗೆ ಶಿಸ್ತು ಇಷ್ಟ ಆಗಲ್ಲ,+ತಿದ್ದುವಾಗ ದ್ವೇಷಿಸುವವನು ತನ್ನ ಜೀವ ಕಳ್ಕೊಳ್ತಾನೆ.+ 11  ಯೆಹೋವನಿಗೆ ಸಮಾಧಿಯಲ್ಲಿ* ಇರುವವ್ರನ್ನ, ನಾಶದ ಜಾಗದಲ್ಲಿ* ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+ 12  ಗೇಲಿ ಮಾಡುವವನು ತನ್ನನ್ನ ತಿದ್ದುವವನನ್ನ ಇಷ್ಟಪಡಲ್ಲ.+ ಅವನು ವಿವೇಕಿಯ ಸಲಹೆಯನ್ನ ಕೇಳಲ್ಲ.+ 13  ಹರ್ಷಹೃದಯದಿಂದ ಹಸನ್ಮುಖ,ಮನೋವ್ಯಥೆಯಿಂದ ನಿರುತ್ಸಾಹ.+ 14  ಅರ್ಥ ಮಾಡ್ಕೊಳ್ಳೋ ಹೃದಯ ಜ್ಞಾನವನ್ನ ಹುಡುಕುತ್ತೆ,+ಮೂರ್ಖ ತನ್ನ ಬಾಯಲ್ಲಿ ಮೂರ್ಖತನವನ್ನ ತುಂಬಿಸ್ತಾನೆ.+ 15  ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ,+ಸಂತೋಷದ* ಹೃದಯ ಇರುವವನಿಗೆ ದಿನಾಲೂ ಔತಣ.+ 16  ತುಂಬ ಆಸ್ತಿ ಇದ್ದು ಚಿಂತೆಯಲ್ಲಿ ಮುಳುಗೋದಕ್ಕಿಂತ,+ಸ್ವಲ್ಪನೇ ಇದ್ದು ಯೆಹೋವನಿಗೆ ಭಯಪಡೋದು ಒಳ್ಳೇದು.+ 17  ದ್ವೇಷ ಇರೋ ಮನೇಲಿ ಮಾಂಸದೂಟ* ಮಾಡೋದಕ್ಕಿಂತ,+ಪ್ರೀತಿ ಇರೋ ಮನೇಲಿ ತರಕಾರಿ* ಊಟ ಮಾಡೋದೇ ಒಳ್ಳೇದು.+ 18  ಕೋಪಿಷ್ಠ ಜಗಳ ಜಾಸ್ತಿ ಮಾಡ್ತಾನೆ,+ತಟ್ಟಂಥ ಕೋಪ ಮಾಡ್ಕೊಳ್ಳದವನು ಜಗಳನ ಶಾಂತ ಮಾಡ್ತಾನೆ.+ 19  ಮೈಗಳ್ಳನ ದಾರಿ ಮುಳ್ಳಿನ ಬೇಲಿ,+ನೀತಿವಂತನ ದಾರಿ ಸಮತಟ್ಟಾದ ಹೆದ್ದಾರಿ.+ 20  ವಿವೇಕಿಯಾದ ಮಗ ತನ್ನ ಅಪ್ಪನನ್ನ ಸಂತೋಷ ಪಡಿಸ್ತಾನೆ,+ಮೂರ್ಖ ತನ್ನ ಅಮ್ಮನನ್ನ ಕೀಳಾಗಿ ನೋಡ್ತಾನೆ.+ 21  ಬುದ್ಧಿ ಇಲ್ಲದವನಿಗೆ* ಮೂರ್ಖತನದಿಂದ ಸಂತೋಷ ಸಿಗುತ್ತೆ,+ವಿವೇಚನೆ ಇರುವವನು ಸರಿ ದಾರಿಯಲ್ಲಿ ಹೋಗ್ತಾನೆ.+ 22  ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ,ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ.+ 23  ಸರಿ ಉತ್ತರ ಕೊಡುವವನು ಸಂತೋಷವಾಗಿ ಇರ್ತಾನೆ,+ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.+ 24  ಜೀವದ ದಾರಿ ತಿಳುವಳಿಕೆ* ಇರುವವನನ್ನ ಮೇಲೆ ಏರಿಸುತ್ತೆ,+ಕೆಳಗಿರೋ ಸಮಾಧಿ ಕಡೆ ಹೋಗದ ಹಾಗೆ ತಡಿಯುತ್ತೆ.+ 25  ಯೆಹೋವ ಅಹಂಕಾರಿಯ ಮನೆಯನ್ನ ಮುರಿದುಬಿಡ್ತಾನೆ,+ವಿಧವೆಯ ಜಮೀನಿನ ಗಡಿಗಳನ್ನ ಕಾದು ಕಾಪಾಡ್ತಾನೆ.+ 26  ಕೆಟ್ಟವನ ಸಂಚು ಯೆಹೋವನಿಗೆ ಇಷ್ಟ ಇಲ್ಲ,+ಹಿತವಾದ ನುಡಿಗಳು ಆತನಿಗೆ ಇಷ್ಟ.+ 27  ಮೋಸದಿಂದ ಹಣ ಮಾಡುವವನು ತನ್ನ ಮನೆಯವ್ರ ಮೇಲೆ ಕಷ್ಟ ತಂದಿಡ್ತಾನೆ,+ಆದ್ರೆ ಲಂಚವನ್ನ ದ್ವೇಷಿಸುವವನು ಬಾಳಿ ಬದುಕ್ತಾನೆ.+ 28  ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ,*+ಆದ್ರೆ ಕೆಟ್ಟವನ ಬಾಯಿ ಕೆಟ್ಟ ವಿಷ್ಯಗಳನ್ನ ಕಕ್ಕುತ್ತೆ. 29  ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+ 30  ಹೊಳೆಯೋ ಕಣ್ಣನ್ನ ನೋಡಿದ್ರೆ* ಹೃದಯಕ್ಕೆ ಖುಷಿ,ಒಳ್ಳೇ ಸುದ್ದಿಯಿಂದ ಮೂಳೆಗೆ ಚೈತನ್ಯ.+ 31  ಜೀವ ಕೊಡೋ ಬುದ್ಧಿಮಾತನ್ನ* ಕೇಳುವವನುವಿವೇಕಿಗಳ ಜೊತೆ ಇರ್ತಾನೆ.+ 32  ಶಿಸ್ತನ್ನ ತಿರಸ್ಕರಿಸುವವನು ತನ್ನ ಜೀವವನ್ನ ಕೀಳಾಗಿ ನೋಡ್ತಾನೆ,+ತಿದ್ದುವಾಗ ಸ್ವೀಕರಿಸುವವನು ಅರ್ಥ ಮಾಡ್ಕೊಳ್ಳೋ ಶಕ್ತಿ* ಪಡಿತಾನೆ.+ 33  ಯೆಹೋವನ ಭಯವೇ ವಿವೇಕವನ್ನ ಕಲಿಸೋ ತರಬೇತಿ,+ದೀನತೆಯಿಂದ ಇದ್ರೆ ಗೌರವ ಸಿಗುತ್ತೆ.+

ಪಾದಟಿಪ್ಪಣಿ

ಅಥವಾ “ನೋವು ಮಾಡೋ.”
ಅಥವಾ “ಹಿತವಾದ.”
ಅಥವಾ “ವಾಸಿಮಾಡೋ ನಾಲಿಗೆ.”
ಅಕ್ಷ. “ಜೀವದ ಮರ.”
ಅಕ್ಷ. “ಫಲ.”
ಅಥವಾ “ಅಬದ್ದೋನಲ್ಲಿ.” ಪದವಿವರಣೆ ನೋಡಿ.
ಅಥವಾ “ಒಳ್ಳೇ.”
ಅಕ್ಷ. “ಸರಳ.”
ಅಕ್ಷ. “ದಷ್ಟಪುಷ್ಟವಾದ ಹೋರಿ.”
ಅಕ್ಷ. “ಹೃದಯ ಇಲ್ಲದವನಿಗೆ.”
ಅಕ್ಷ. “ಒಳನೋಟ.”
ಅಥವಾ “ಹೇಗೆ ಉತ್ತರ ಕೊಡಬೇಕಂತ ಜಾಗ್ರತೆಯಿಂದ ಪರಿಗಣಿಸುತ್ತೆ, ಮಾತಾಡೋ ಮುಂಚೆ ಯೋಚಿಸುತ್ತೆ.”
ಅಥವಾ “ಸಂತೋಷದ ನೋಟದಿಂದ.”
ಅಥವಾ “ತಿದ್ದುಪಾಟನ್ನ.”
ಅಕ್ಷ. “ಹೃದಯ.”