ಮತ್ತಾಯ 2:1-23

  • ಜ್ಯೋತಿಷಿಗಳು ಬಂದ್ರು (1-12)

  • ಈಜಿಪ್ಟಿಗೆ ಓಡಿಹೋದ್ರು (13-15)

  • ಹೆರೋದ ಗಂಡುಮಕ್ಕಳನ್ನ ಸಾಯಿಸಿದ (16-18)

  • ನಜರೇತಿಗೆ ವಾಪಸ್‌ ಬಂದ್ರು (19-23)

2  ಯೇಸು ಯೂದಾಯದ ಬೆತ್ಲೆಹೇಮಲ್ಲಿ+ ಹುಟ್ಟಿದನು. ಆಗ ಹೆರೋದ*+ ರಾಜನಾಗಿದ್ದ. ಯೇಸು ಹುಟ್ಟಿದ ಮೇಲೆ ಪೂರ್ವ ದಿಕ್ಕಿಂದ ಜ್ಯೋತಿಷಿಗಳು ಯೆರೂಸಲೇಮಿಗೆ ಬಂದ್ರು.  ಅವರು ರಾಜನಿಗೆ “ಯೆಹೂದ್ಯರ ರಾಜನಾಗಿ ಹುಟ್ಟಿದವನು ಎಲ್ಲಿದ್ದಾನೆ?+ ನಾವು ಪೂರ್ವದಲ್ಲಿದ್ದಾಗ ಆತನು ಎಲ್ಲಿದ್ದಾನೆ ಅಂತ ತೋರಿಸೋ ನಕ್ಷತ್ರ ನಮಗೆ ಕಾಣಿಸ್ತು. ಅದನ್ನ ನೋಡಿ ಆತನಿಗೆ ನಮಸ್ಕಾರ ಮಾಡೋಕೆ* ಬಂದಿದ್ದೀವಿ” ಅಂದ್ರು.  ಇದನ್ನ ಕೇಳಿ ರಾಜ ಹೆರೋದನಿಗೆ ಗಾಬರಿ ಆಯ್ತು. ಯೆರೂಸಲೇಮಿನ ಜನ್ರಿಗೂ ಗೊಂದಲ ಆಯ್ತು.  ಆಗ ರಾಜ ಎಲ್ಲ ಮುಖ್ಯ ಪುರೋಹಿತರನ್ನ, ಪಂಡಿತರನ್ನ ಸಭೆ ಸೇರಿಸಿ ಕ್ರಿಸ್ತ* ಎಲ್ಲಿ ಹುಟ್ತಾನೆ ಅಂತ ವಿಚಾರಿಸಿದ.⁠  ಅದಕ್ಕವರು “ಯೂದಾಯದ ಬೆತ್ಲೆಹೇಮಲ್ಲಿ.+ ಯಾಕಂದ್ರೆ ಒಬ್ಬ ಪ್ರವಾದಿ ಹೀಗೆ ಬರೆದಿದ್ದಾನೆ:  ‘ಯೆಹೂದದ ಬೆತ್ಲೆಹೇಮೇ, ಯೆಹೂದದ ರಾಜ್ಯಪಾಲರ ದೃಷ್ಟಿಯಲ್ಲಿ ನಿನಗೆ ಬೆಲೆನೇ ಇಲ್ಲ ಅಂತ ನೆನಸಬೇಡ. ಯಾಕಂದ್ರೆ ಒಬ್ಬ ರಾಜ ನಿನ್ನಿಂದ ಬರ್ತಾನೆ. ಆತನು ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಕುರುಬನ ತರ ಇರ್ತಾನೆ’” ಅಂದ್ರು.+  ಆಗ ಹೆರೋದ ಆ ಜ್ಯೋತಿಷಿಗಳನ್ನ ಗುಟ್ಟಾಗಿ ಕರೆಸಿ ನಕ್ಷತ್ರ ಮೊದಲು ಯಾವಾಗ ಕಾಣಿಸ್ತು ಅಂತ ವಿಚಾರಿಸಿ ತಿಳ್ಕೊಂಡ.  ಆಮೇಲೆ “ನೀವು ಹೋಗಿ ಆ ಮಗು ಎಲ್ಲಿದೆ ಅಂತ ಚೆನ್ನಾಗಿ ಹುಡುಕಿ. ಅದು ಸಿಕ್ಕಿದ ಮೇಲೆ ಬಂದು ನನಗೂ ಹೇಳಿ. ನಾನೂ ಹೋಗಿ ಅದಕ್ಕೆ ನಮಸ್ಕರಿಸಬೇಕು” ಅಂತ ಹೇಳಿ ಅವ್ರನ್ನ ಬೆತ್ಲೆಹೇಮಿಗೆ ಕಳಿಸಿದ.  ಅವರು ರಾಜನ ಮಾತನ್ನ ಕೇಳಿ ತಮ್ಮ ದಾರಿಹಿಡಿದು ಹೋದ್ರು. ಆಗ ಇದ್ದಕ್ಕಿದ್ದಂತೆ ಅವರು ಪೂರ್ವದಲ್ಲಿದ್ದಾಗ ನೋಡಿದ ನಕ್ಷತ್ರ+ ಅವ್ರಿಗೆ ದಾರಿ ತೋರಿಸ್ತಾ ಆ ಮಗು ಇದ್ದ ಮನೆ ಮೇಲೆ ಬಂದು ನಿಂತಿತು. 10  ಅದನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು. 11  ಅವರು ಆ ಮನೆಯೊಳಗೆ ಹೋದಾಗ ಮಗು ಅದ್ರ ತಾಯಿ ಮರಿಯ ಹತ್ರ ಇರೋದನ್ನ ನೋಡಿದ್ರು. ಅವರು ಅದಕ್ಕೆ ಬಗ್ಗಿ ನಮಸ್ಕರಿಸಿದ್ರು. ತಮ್ಮ ಪೆಟ್ಟಿಗೆಯಿಂದ ಉಡುಗೊರೆಗಳನ್ನ ಅಂದ್ರೆ ಚಿನ್ನ, ಸಾಂಬ್ರಾಣಿ, ಸುಗಂಧದ್ರವ್ಯ ತೆಗೆದು ಆ ಮಗುಗೆ ಕೊಟ್ರು. 12  ದೇವರು ಅವ್ರಿಗೆ ಹೆರೋದನ ಹತ್ರ ಹೋಗಬೇಡಿ ಅಂತ ಕನಸಲ್ಲಿ+ ಎಚ್ಚರಿಸಿದ್ರಿಂದ ಬೇರೆ ದಾರಿ ಹಿಡಿದು ತಮ್ಮ ದೇಶಕ್ಕೆ ಹೋದ್ರು. 13  ಅವರು ಹೋದ ಮೇಲೆ ಯೆಹೋವನ* ದೂತ ಯೋಸೇಫನ ಕನಸಲ್ಲಿ+ “ತಾಯಿ ಮಗು ಇಬ್ರನ್ನೂ ಕರ್ಕೊಂಡು ಈಜಿಪ್ಟಿಗೆ* ಓಡಿಹೋಗು. ನಾ ಹೇಳೋ ತನಕ ಅಲ್ಲೇ ಇರು. ಯಾಕಂದ್ರೆ ಹೆರೋದ ಈ ಮಗುನ ಕೊಲ್ಲೋಕೆ ಹುಡುಕಬೇಕಂತ ಇದ್ದಾನೆ” ಅಂದ. 14  ಆಗ ಅವನು ರಾತ್ರೋರಾತ್ರಿ ಮಗು ಮತ್ತು ತಾಯಿನ ಕರ್ಕೊಂಡು ಈಜಿಪ್ಟಿಗೆ ಹೋದ. 15  ಹೆರೋದ ಸಾಯೋ ತನಕ ಅವನು ಅಲ್ಲೇ ಇದ್ದ. ಹೀಗೆ ಯೆಹೋವ* ತನ್ನ ಪ್ರವಾದಿ ಮೂಲಕ “ನಾನು ನನ್ನ ಮಗನನ್ನ ಈಜಿಪ್ಟಿಂದ ಕರೆದೆ”+ ಅಂತ ಹೇಳಿದ ಮಾತು ನಿಜ ಆಯ್ತು. 16  ಜ್ಯೋತಿಷಿಗಳು ಮೋಸ ಮಾಡಿದ್ರು ಅಂತ ಗೊತ್ತಾದಾಗ ಹೆರೋದನಿಗೆ ತುಂಬ ಕೋಪ ಬಂತು. ಅವನು ಸೇವಕರಿಗೆ ‘ಹೋಗಿ, ಬೆತ್ಲೆಹೇಮ್‌ ಮತ್ತು ಸುತ್ತಮುತ್ತಲಿನ ಊರಲ್ಲಿರೋ ಎರಡು ವರ್ಷದ ಒಳಗಿನ ಎಲ್ಲ ಗಂಡುಮಕ್ಕಳನ್ನ ಕೊಲ್ಲಿ’ ಅಂತ ಆಜ್ಞೆ ಕೊಟ್ಟ. ಯಾಕಂದ್ರೆ ನಕ್ಷತ್ರ ಕಾಣಿಸಿದ ಸಮಯನ ಅವನು ಜ್ಯೋತಿಷಿಗಳಿಂದ ಕೇಳಿ ತಿಳ್ಕೊಂಡಿದ್ದ.+ 17  ಹೀಗೆ ಪ್ರವಾದಿ ಯೆರೆಮೀಯ ಹೇಳಿದ ಮಾತು ನೆರವೇರಿತು. ಅದೇನಂದ್ರೆ 18  “ಅಳೋ ಮತ್ತು ಗೋಳಾಡೋ ಶಬ್ದ ರಾಮದಿಂದ ಕೇಳಿಸ್ತು. ರಾಹೇಲ+ ತನ್ನ ಮಕ್ಕಳಿಗಾಗಿ ಅಳ್ತಿದ್ದಳು. ಅವರು ಇನ್ನಿಲ್ಲ ಅನ್ನೋ ದುಃಖದ ಕಾರಣ ಎಷ್ಟು ಸಂತೈಸಿದ್ರೂ ಅವಳಿಗೆ ಸಮಾಧಾನ ಆಗಲಿಲ್ಲ.”+ 19  ಹೆರೋದ ಸತ್ತ ಮೇಲೆ ಯೆಹೋವನ* ದೂತ ಈಜಿಪ್ಟಲ್ಲಿದ್ದ ಯೋಸೇಫನ ಕನಸಲ್ಲಿ ಬಂದು+ 20  “ತಾಯಿ, ಮಗು ಇಬ್ರನ್ನೂ ಕರ್ಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋಗು. ಮಗುವಿನ ಪ್ರಾಣ ತೆಗಿಯೋಕೆ ಪ್ರಯತ್ನಿಸಿದವರು ಸತ್ತುಹೋಗಿದ್ದಾರೆ” ಅಂದ. 21  ಆಗ ಯೋಸೇಫ ಮಗುವನ್ನ, ಅದ್ರ ತಾಯಿಯನ್ನ ಕರ್ಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋದ. 22  ಆದ್ರೆ ಹೆರೋದನ ಬದಲು ಅವನ ಮಗ ಅರ್ಖೆಲಾಯ ಯೂದಾಯದ ರಾಜ ಆಗಿದ್ದಾನೆ ಅಂತ ಗೊತ್ತಾಗಿ ಅಲ್ಲಿಗೆ ಹೋಗೋಕೆ ಯೋಸೇಫ ಭಯಪಟ್ಟ. ಅಷ್ಟೇ ಅಲ್ಲ ದೇವರು ಕನಸಲ್ಲಿ+ ಎಚ್ಚರಿಸಿದ್ರಿಂದ ಅವನು ಗಲಿಲಾಯಕ್ಕೆ ಹೋದ.+ 23  ನಜರೇತ್‌ ಪಟ್ಟಣದಲ್ಲಿ ವಾಸ ಮಾಡಿದ.+ ಹೀಗೆ “ಆತನನ್ನ* ನಜರೇತಿನವನು* ಅಂತ ಕರಿತಾರೆ”+ ಅನ್ನೋ ಪ್ರವಾದಿಗಳ ಮಾತು ನಿಜ ಆಯ್ತು.

ಪಾದಟಿಪ್ಪಣಿ

ಅಥವಾ “ಅಡ್ಡಬೀಳೋಕೆ.”
ಅಥವಾ “ಮೆಸ್ಸೀಯ, ಅಭಿಷಿಕ್ತ.”
ಅಥವಾ “ಐಗುಪ್ತಕ್ಕೆ.”
ಅಂದ್ರೆ, ಕ್ರಿಸ್ತನನ್ನ.
“ನಜರೇತಿನವನು” ಅನ್ನೋ ಗ್ರೀಕ್‌ ಪದ ಹೀಬ್ರುನ “ಹೊಸ ಚಿಗುರು” ಅನ್ನೋ ಪದದಿಂದ ಬಂದಿರಬಹುದು.