ಯೆಹೆಜ್ಕೇಲ 3:1-27
3 ಆಮೇಲೆ ಆತನು ನನಗೆ “ಮನುಷ್ಯಕುಮಾರನೇ, ನಿನ್ನ ಮುಂದೆ ಇರೋ ಈ ಸುರುಳಿಯನ್ನ ತಿನ್ನು. ಆಮೇಲೆ ಇಸ್ರಾಯೇಲ್ಯರ ಹತ್ರ ಹೋಗಿ ಮಾತಾಡು”+ ಅಂದನು.
2 ನಾನು ಬಾಯಿ ತೆಗೆದಾಗ, ಆತನು ಸುರುಳಿಯನ್ನ ನನಗೆ ತಿನ್ನೋಕೆ ಕೊಟ್ಟನು.
3 ಆತನು ನನಗೆ “ಮನುಷ್ಯಕುಮಾರನೇ, ನಾನು ಕೊಡ್ತಿರೋ ಈ ಸುರುಳಿಯನ್ನ ತಿಂದು ಹೊಟ್ಟೆ ತುಂಬಿಸ್ಕೊ” ಅಂದನು. ಹಾಗಾಗಿ ನಾನು ಅದನ್ನ ತಿನ್ನೋಕೆ ಶುರುಮಾಡ್ದೆ. ಅದು ನನ್ನ ಬಾಯಲ್ಲಿ ಜೇನಿನಷ್ಟು ಸಿಹಿಯಾಗಿತ್ತು.+
4 ಆತನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಹತ್ರ ಹೋಗಿ ನಾನು ಹೇಳೋ ಮಾತುಗಳನ್ನ ಹೇಳು.
5 ನಾನು ನಿನಗೆ ಗೊತ್ತಿಲ್ಲದ, ಅರ್ಥ ಮಾಡ್ಕೊಳ್ಳೋಕೆ ಕಷ್ಟವಾದ ಭಾಷೆ ಮಾತಾಡೋ ಜನ್ರ ಹತ್ರ ಕಳಿಸ್ತಿಲ್ಲ, ಇಸ್ರಾಯೇಲ್ಯರ ಹತ್ರ ಕಳಿಸ್ತಿದ್ದೀನಿ.
6 ನಿನಗೆ ಅರ್ಥ ಮಾಡ್ಕೊಳ್ಳೋಕೆ ಕಷ್ಟವಾದ, ಗೊತ್ತಿಲ್ಲದ ಭಾಷೆ ಮಾತಾಡೋ ಅಥವಾ ಅರ್ಥಾನೇ ಆಗದ ಮಾತುಗಳನ್ನಾಡೋ ಬೇರೆ ಬೇರೆ ಜನಾಂಗಗಳ ಹತ್ರ ನಾನು ನಿನ್ನನ್ನ ಕಳಿಸ್ತಿಲ್ಲ. ಹಾಗೇನಾದ್ರೂ ನಾನು ನಿನ್ನನ್ನ ಕಳಿಸಿದ್ರೆ ಅವರು ನಿಜವಾಗ್ಲೂ ನೀನು ಹೇಳೋದನ್ನ ಕೇಳ್ತಾರೆ.+
7 ಆದ್ರೆ ಇಸ್ರಾಯೇಲ್ಯರು ನೀನು ಹೇಳೋದನ್ನ ಕಿವಿಗೆ ಹಾಕೊಳ್ಳೋದೇ ಇಲ್ಲ, ಯಾಕಂದ್ರೆ ನನ್ನ ಮಾತನ್ನ ಕೇಳೋಕೆ ಅವ್ರಿಗೆ ಇಷ್ಟ ಇಲ್ಲ.+ ಇಸ್ರಾಯೇಲ್ಯರು ಹಠಮಾರಿಗಳು, ಕಲ್ಲೆದೆಯವರು.+
8 ನೋಡು! ನಾನು ನಿನ್ನ ಮುಖವನ್ನ ಅವ್ರ ಮುಖಗಳಷ್ಟೇ ಕಠಿಣವಾಗಿ ಮಾಡಿದ್ದೀನಿ, ನಿನ್ನ ಹಣೆಯನ್ನ ಅವ್ರ ಹಣೆಗಳಷ್ಟೇ ಗಟ್ಟಿಯಾಗಿ ಮಾಡಿದ್ದೀನಿ.+
9 ನಾನು ನಿನ್ನ ಹಣೆಯನ್ನ ವಜ್ರದಷ್ಟು ಗಟ್ಟಿಯಾಗಿ, ಗಡುಸು ಕಲ್ಲಿಗಿಂತ+ ಗಟ್ಟಿಯಾಗಿ ಮಾಡಿದ್ದೀನಿ. ನೀನು ಅವ್ರಿಗೆ ಹೆದರಬೇಡ, ಅವ್ರ ಮುಖ ನೋಡಿ ಗಾಬರಿ ಆಗಬೇಡ.+ ಯಾಕಂದ್ರೆ ಅವರು ದಂಗೆಕೋರರು” ಅಂದನು.
10 ಆತನು ಇನ್ನೂ ಮಾತಾಡ್ತಾ “ಮನುಷ್ಯಕುಮಾರನೇ, ನಾನು ನಿನಗೆ ಹೇಳೋದನ್ನೆಲ್ಲ ಗಮನಕೊಟ್ಟು ಕೇಳು, ಅದನ್ನ ಮನಸ್ಸಲ್ಲಿ ಇಟ್ಕೊ.
11 ಕೈದಿಗಳಾಗಿರೋ ನಿನ್ನ ಜನ್ರ+ ಹತ್ರ ಹೋಗಿ ಮಾತಾಡು. ಅವರು ಕೇಳಲಿ ಬಿಡಲಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳು” ಅಂದನು.+
12 ಆಮೇಲೆ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಹೋಯ್ತು.+ ಆಗ ನನ್ನ ಹಿಂದೆ ಒಂದು ದೊಡ್ಡ ಗುಡುಗಿನ ಶಬ್ದ ಕೇಳಿಸ್ತು. ಅದ್ರ ಜೊತೆ “ಯೆಹೋವನ ಮಹಿಮೆಗೆ ಸ್ವರ್ಗದಿಂದ ಹೊಗಳಿಕೆ ಸಿಗಲಿ” ಅಂತ ಹೇಳ್ತಿರೋ ಧ್ವನಿ ಕೇಳಿಸ್ತು.
13 ಜೀವಿಗಳ ರೆಕ್ಕೆಗಳು ಒಂದಕ್ಕೊಂದು ತಾಗ್ತಿದ್ದ ಶಬ್ದ,+ ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಶಬ್ದ+ ಮತ್ತು ದೊಡ್ಡ ಗುಡುಗಿನ ಶಬ್ದ ಕೇಳಿಸ್ತಿತ್ತು.
14 ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಹೋಯ್ತು. ನಾನು ದುಃಖದಿಂದ, ಕೋಪದಿಂದ ಹೋದೆ. ಯೆಹೋವನ ಪವಿತ್ರಶಕ್ತಿ* ನನ್ನೊಳಗೆ ವೇಗವಾಗಿ ಕೆಲಸಮಾಡ್ತಿದೆ ಅಂತ ನನಗೆ ಗೊತ್ತಾಯ್ತು.
15 ಹಾಗಾಗಿ ತೇಲ್-ಆಬೀಬಲ್ಲಿ, ಕೆಬಾರ್ ನದಿ ಹತ್ರ+ ಕೈದಿಗಳಾಗಿದ್ದ ಜನ್ರ ಹತ್ರ ನಾನು ಹೋಗಿ ಅಲ್ಲೇ ಉಳ್ಕೊಂಡೆ. ನಾನು ಅವ್ರ ಮಧ್ಯ ಏಳು ದಿನ ಮಂಕು ಬಡಿದವನ ತರ ಇದ್ದೆ.+
16 ಏಳು ದಿನ ಆದ್ಮೇಲೆ ಯೆಹೋವ ನನಗೆ ಹೀಗಂದನು:
17 “ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್ಯರಿಗೆ ಕಾವಲುಗಾರನಾಗಿ ಇಟ್ಟಿದ್ದೀನಿ.+ ನಾನು ನಿನಗೆ ಹೇಳೋದನ್ನೆಲ್ಲ ಅವ್ರಿಗೆ ಹೇಳಿ ನನ್ನ ಪರವಾಗಿ ಅವ್ರಿಗೆ ಎಚ್ಚರಿಕೆ ಕೊಡ್ಬೇಕು.+
18 ನಾನು ಒಬ್ಬ ಕೆಟ್ಟವನಿಗೆ ‘ನೀನು ಸತ್ತೇ ಸಾಯ್ತೀಯ’ ಅಂತ ಹೇಳ್ದಾಗ ನೀನು ಹೋಗಿ ಅವನಿಗೆ ಎಚ್ಚರಿಕೆ ಕೊಡ್ಲಿಲ್ಲ ಅಂದ್ರೆ ಮತ್ತು ಅವನು ಕೆಟ್ಟತನ ಬಿಟ್ಟುಬಿಟ್ಟು ತನ್ನ ಜೀವ ಉಳಿಸ್ಕೊಳ್ಳೋಕೆ ನೀನು ಹೇಳದಿದ್ರೆ+ ಆ ಕೆಟ್ಟವನಂತೂ ಅವನು ಮಾಡಿದ ತಪ್ಪಿಗಾಗಿ ಸಾಯ್ತಾನೆ.+ ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.+
19 ಆದ್ರೆ ನೀನು ಒಬ್ಬ ಕೆಟ್ಟವನನ್ನ ಎಚ್ಚರಿಸಿದ ಮೇಲೂ ಅವನು ಕೆಟ್ಟತನ ಬಿಡದೆ ಅದನ್ನೇ ಮಾಡ್ತಾ ಇದ್ರೆ ಅವನು ತನ್ನ ತಪ್ಪಿಗಾಗಿ ಸಾಯ್ತಾನೆ, ಆದ್ರೆ ನೀನು ನಿನ್ನ ಜೀವ ಉಳಿಸ್ಕೊಳ್ತೀಯ.+
20 ಆದ್ರೆ ಒಬ್ಬ ನೀತಿವಂತ ಒಳ್ಳೇ ರೀತಿ ಜೀವಿಸೋದನ್ನ ಬಿಟ್ಟು ಕೆಟ್ಟದು* ಮಾಡಿದ್ರೆ ನಾನು ಅವನ ಮೇಲೆ ಕಷ್ಟ ತರ್ತಿನಿ, ಆಗ ಅವನು ಸಾಯ್ತಾನೆ.+ ನೀನು ಅವನನ್ನ ಎಚ್ಚರಿಸದೇ ಇದ್ರೆ ಅವನಂತೂ ತನ್ನ ಪಾಪಕ್ಕಾಗಿ ಸಾಯ್ತಾನೆ, ಅವನ ಒಳ್ಳೇ ಕೆಲಸಗಳನ್ನ ನಾನು ನೆನಪಿಸ್ಕೊಳ್ಳಲ್ಲ. ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.+
21 ಆದ್ರೆ ನೀನು ಒಬ್ಬ ನೀತಿವಂತನಿಗೆ ಪಾಪ ಮಾಡಬೇಡ ಅಂತ ಎಚ್ಚರಿಸಿದ್ರೆ ಮತ್ತು ಅವನು ಅದನ್ನ ಕೇಳಿ ಪಾಪ ಮಾಡದಿದ್ರೆ ಅವನು ನಿಜವಾಗ್ಲೂ ತನ್ನ ಜೀವ ಉಳಿಸ್ಕೊಳ್ತಾನೆ.+ ನೀನೂ ನಿನ್ನ ಜೀವ ಉಳಿಸ್ಕೊಳ್ತೀಯ.”
22 ಆಮೇಲೆ ಅಲ್ಲಿ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂತು. ಆತನು ನನಗೆ “ನೀನೆದ್ದು ಕಣಿವೆ ಬೈಲಿಗೆ ಹೋಗು, ಅಲ್ಲಿ ನಾನು ನಿನ್ನ ಜೊತೆ ಮಾತಾಡ್ತೀನಿ” ಅಂದನು.
23 ನಾನೆದ್ದು ಕಣಿವೆ ಬೈಲಿಗೆ ಹೋದೆ. ಅಲ್ಲಿ ನನಗೆ ಯೆಹೋವನ ಮಹಿಮೆ ಕಾಣಿಸ್ತು!+ ಕೆಬಾರ್ ನದಿ ಹತ್ರ+ ನೋಡಿದ ಅದೇ ಮಹಿಮೆಯನ್ನ ಇಲ್ಲೂ ನೋಡ್ದೆ. ಅದನ್ನ ನೋಡಿ ಅಡ್ಡಬಿದ್ದೆ.
24 ಆಗ ದೇವರ ಪವಿತ್ರಶಕ್ತಿ ನನ್ನೊಳಗೆ ಬಂದು ನಾನು ಎದ್ದು ನಿಲ್ಲೋ ತರ ಮಾಡ್ತು.+ ಆಮೇಲೆ ಆತನು ನನ್ನ ಜೊತೆ ಮಾತಾಡ್ತಾ ಹೀಗಂದನು:
“ನೀನು ನಿನ್ನ ಮನೆಯೊಳಗೆ ಹೋಗಿ ಬಾಗಿಲು ಮುಚ್ಕೊ.
25 ಮನುಷ್ಯಕುಮಾರನೇ, ನೀನು ಜನ್ರ ಮುಂದೆ ಬರಬಾರದು ಅಂತ ಅವರು ನಿನ್ನನ್ನ ಹಿಡಿದು ಹಗ್ಗಗಳಿಂದ ಕಟ್ತಾರೆ.
26 ನಿನ್ನ ನಾಲಿಗೆ ಬಾಯೊಳಗೆ ಅಂಟ್ಕೊಳ್ಳೋ ಹಾಗೆ ನಾನು ಮಾಡ್ತೀನಿ. ಆಗ ನೀನು ಮೂಕನ ತರ ಆಗ್ತೀಯ. ಅವ್ರನ್ನ ಖಂಡಿಸೋಕೆ ನಿನ್ನಿಂದ ಆಗಲ್ಲ. ಯಾಕಂದ್ರೆ ಅವರು ದಂಗೆಕೋರ ಜನ್ರು.
27 ಆದ್ರೆ ನಾನು ನಿನ್ನ ಜೊತೆ ಮಾತಾಡುವಾಗ ನೀನು ಮತ್ತೆ ಮಾತಾಡೋ ಹಾಗೆ ಮಾಡ್ತೀನಿ. ಆಗ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳಬೇಕು.+ ಕೇಳೋಕೆ ಮನಸ್ಸು ಇರುವವನು ಕೇಳಲಿ,+ ಮನಸ್ಸು ಇಲ್ಲದವನು ಬಿಡಲಿ. ಯಾಕಂದ್ರೆ ಅವರು ದಂಗೆಕೋರರು.+
ಪಾದಟಿಪ್ಪಣಿ
^ ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
^ ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
^ ಅಕ್ಷ. “ಕೈ.”
^ ಅಥವಾ “ಅನ್ಯಾಯ.”
^ ಅಕ್ಷ. “ಕೈ.”