ಯೆಹೆಜ್ಕೇಲ 8:1-18
8 ಆರನೇ ವರ್ಷದ* ಆರನೇ ತಿಂಗಳ ಐದನೇ ದಿನ ಅದಾಗಿತ್ತು. ನಾನು ನನ್ನ ಮನೆಯಲ್ಲಿ ಕೂತಿದ್ದೆ, ನನ್ನ ಮುಂದೆ ಯೆಹೂದದ ಹಿರಿಯರು ಕೂತಿದ್ರು. ಆಗ ವಿಶ್ವದ ರಾಜ ಯೆಹೋವನ ಶಕ್ತಿ* ನನ್ನಲ್ಲಿ ಕೆಲಸಮಾಡೋಕೆ ಶುರುಮಾಡ್ತು.
2 ನಾನು ಗಮನಿಸ್ತಾ ಇದ್ದಾಗ ಒಬ್ಬ ಮನುಷ್ಯನ ರೂಪ ಕಾಣಿಸ್ತು. ಅವನು ಬೆಂಕಿ ತರ ಇದ್ದ. ಯಾವುದು ಅವನ ಸೊಂಟದ ಹಾಗೆ ಕಾಣಿಸ್ತೋ ಅದರ ಕೆಳಗೆ ಬೆಂಕಿ ಇತ್ತು.+ ಅವನ ಸೊಂಟದಿಂದ ಮೇಲಕ್ಕೆ ಚಿನ್ನಬೆಳ್ಳಿ ತರ ಹೊಳೀತಾ ಇತ್ತು.+
3 ಆಮೇಲೆ ಕೈ ತರ ಕಾಣ್ತಿದ್ದದನ್ನ ಚಾಚಿ ಅವನು ನನ್ನ ತಲೆಕೂದಲನ್ನ ಹಿಡಿದ. ದೇವರು ತೋರಿಸಿದ ಒಂದು ದರ್ಶನದಲ್ಲಿ ಪವಿತ್ರಶಕ್ತಿ* ನನ್ನನ್ನ ಗಾಳಿಯಲ್ಲಿ* ಎತ್ಕೊಂಡು ಯೆರೂಸಲೇಮಿಗೆ ಹೋಯ್ತು. ಅದು ನನ್ನನ್ನ ಉತ್ತರದ ಕಡೆಗಿರೋ ಒಳಗಿನ ಬಾಗಿಲ ಹತ್ರ ಕರ್ಕೊಂಡು ಹೋಯ್ತು.+ ಅಲ್ಲಿ ದೇವರಿಗೆ ಸಿಟ್ಟು* ಬರಿಸೋ ಮೂರ್ತಿ ಇತ್ತು.+
4 ಆಹಾ! ನಾನಲ್ಲಿ ಇಸ್ರಾಯೇಲಿನ ದೇವರ ಮಹಿಮೆಯನ್ನ ನೋಡಿದೆ.+ ಅದು ಕಣಿವೆ ಬಯಲಲ್ಲಿ ನಾನು ನೋಡಿದ್ದ ಮಹಿಮೆ ತರಾನೇ ಇತ್ತು.+
5 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ದಯವಿಟ್ಟು ನಿನ್ನ ಕಣ್ಣೆತ್ತಿ ಉತ್ತರದ ಕಡೆ ನೋಡು” ಅಂದ. ಆಗ ನಾನು ಕಣ್ಣೆತ್ತಿ ಉತ್ತರದ ಕಡೆ ನೋಡ್ದೆ. ಅಲ್ಲಿ ಯಜ್ಞವೇದಿಯ ಉತ್ತರಕ್ಕಿದ್ದ ಬಾಗಿಲಲ್ಲಿ ದೇವರಿಗೆ ಸಿಟ್ಟು* ಬರಿಸೋ ಆ ಮೂರ್ತಿ ಇತ್ತು.
6 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ ಜನ್ರು ಇಲ್ಲಿ ಎಂಥ ಅಸಹ್ಯ ಕೆಲಸಗಳನ್ನ ಮಾಡ್ತಿದ್ದಾರೆ ಅಂತ ನೋಡಿದ್ಯಾ?+ ನಾನು ನನ್ನ ಆಲಯವನ್ನ ಬಿಟ್ಟು ದೂರ ಹೋಗೋ ಹಾಗೆ ಇವರು ನಡ್ಕೊತಿದ್ದಾರೆ.+ ಆದ್ರೆ ಇದಕ್ಕಿಂತ ಅಸಹ್ಯ ಕೆಲಸಗಳು ನಡಿಯೋದನ್ನ ನೀನು ನೋಡ್ತೀಯ” ಅಂದ.
7 ಆಮೇಲೆ ಅವನು ನನ್ನನ್ನ ಅಂಗಳದ ಬಾಗಿಲ ಹತ್ರ ಕರ್ಕೊಂಡು ಬಂದ. ನಾನು ಅಲ್ಲಿದ್ದ ಗೋಡೆಯನ್ನ ನೋಡಿದಾಗ ಗೋಡೆಯಲ್ಲಿ ಒಂದು ತೂತು ಕಾಣಿಸ್ತು.
8 ಆಗ ಅವನು “ಮನುಷ್ಯಕುಮಾರನೇ, ದಯವಿಟ್ಟು ಗೋಡೆಯಲ್ಲಿರೋ ಆ ತೂತನ್ನ ಕೊರೆದು ದೊಡ್ಡದು ಮಾಡು” ಅಂದ. ನಾನು ಆ ತೂತನ್ನ ದೊಡ್ಡದು ಮಾಡ್ದೆ. ಆಗ ನನಗೆ ಅಲ್ಲಿಂದ ಒಂದು ಬಾಗಿಲು ಕಾಣಿಸ್ತು.
9 ಅವನು ನನಗೆ “ಒಳಗೆ ಹೋಗಿ ಇಲ್ಲಿ ಅವರು ಮಾಡ್ತಿರೋ ಅಸಹ್ಯವಾದ ಕೆಟ್ಟ ಕೆಲಸಗಳನ್ನ ನೋಡು” ಅಂದ.
10 ಹಾಗಾಗಿ ನಾನು ಒಳಗೆ ಹೋಗಿ ನೋಡ್ದೆ. ಅಲ್ಲಿ ಸುತ್ತ ಗೋಡೆ ಮೇಲೆ ಎಲ್ಲ ತರದ ಹರಿದಾಡೋ ಜೀವಿಗಳ, ಹೇಸಿಗೆ ಹುಟ್ಟಿಸೋ ಪ್ರಾಣಿಗಳ+ ಮತ್ತು ಇಸ್ರಾಯೇಲ್ ಜನ್ರ ಅಸಹ್ಯ ಮೂರ್ತಿಗಳ*+ ಚಿತ್ರಗಳನ್ನ ಕೆತ್ತಲಾಗಿತ್ತು.
11 ಅವುಗಳ ಮುಂದೆ ಇಸ್ರಾಯೇಲ್ಯರ 70 ಹಿರಿಯರು ನಿಂತಿದ್ರು. ಅವ್ರ ಜೊತೆ ಶಾಫಾನನ+ ಮಗ ಯಾಜನ್ಯನೂ ನಿಂತಿದ್ದ. ಒಬ್ಬೊಬ್ಬನ ಕೈಯಲ್ಲೂ ಧೂಪಪಾತ್ರೆ ಇತ್ತು. ಅದ್ರಿಂದ ಸುವಾಸನೆಯ ಹೊಗೆ ಮೇಲೆ ಹೋಗ್ತಿತ್ತು.+
12 ಆಗ ಅವನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಹಿರಿಯರಲ್ಲಿ ಪ್ರತಿಯೊಬ್ಬನು ಮೂರ್ತಿಗಳಿರೋ ಒಳಗಿನ ಕೋಣೆಗಳಲ್ಲಿ, ಕತ್ತಲೆಯಲ್ಲಿ ಏನು ಮಾಡ್ತಿದ್ದಾನೆ ಅಂತ ನೀನು ನೋಡಿದ್ಯಾ? ‘ಯೆಹೋವ ನಮ್ಮನ್ನ ನೋಡ್ತಿಲ್ಲ, ಯೆಹೋವ ಈ ದೇಶನ ಬಿಟ್ಟುಬಿಟ್ಟಿದ್ದಾನೆ’ ಅಂತ ಅವರು ಹೇಳ್ತಿದ್ದಾರೆ”+ ಅಂದ.
13 ಆಮೇಲೆ ಅವನು ನನಗೆ “ಇದಕ್ಕಿಂತ ಅಸಹ್ಯ ಕೆಲಸಗಳನ್ನ ಅವರು ಮಾಡೋದನ್ನ ನೀನು ನೋಡ್ತೀಯ” ಅಂದ.
14 ಆಮೇಲೆ ಅವನು ನನ್ನನ್ನ ಯೆಹೋವನ ಆಲಯದ ಉತ್ತರಕ್ಕಿದ್ದ ಬಾಗಿಲ ಹತ್ರ ಕರ್ಕೊಂಡು ಬಂದ. ಅಲ್ಲಿ ಹೆಂಗಸರು ಕೂತು ತಮ್ಮೂಜ್ ದೇವನಿಗಾಗಿ ಅಳೋದು ನನಗೆ ಕಾಣಿಸ್ತು.
15 ಅವನು ನನಗೆ “ಮನುಷ್ಯಕುಮಾರನೇ, ನೋಡಿದ್ಯಾ? ಇದಕ್ಕಿಂತ ಅಸಹ್ಯ ಕೆಲಸಗಳನ್ನ ನೀನು ನೋಡ್ತೀಯ”+ ಅಂದ.
16 ಆಮೇಲೆ ಅವನು ನನ್ನನ್ನ ಯೆಹೋವನ ಆಲಯದ ಒಳಗಿರೋ ಅಂಗಳಕ್ಕೆ ಕರ್ಕೊಂಡು ಬಂದ.+ ಯೆಹೋವನ ಆಲಯದ ಬಾಗಿಲ ಹತ್ರ ಅಂದ್ರೆ ಮಂಟಪ ಮತ್ತು ಯಜ್ಞವೇದಿಯ ಮಧ್ಯ ಸುಮಾರು 25 ಗಂಡಸ್ರು ಯೆಹೋವನ ಆಲಯಕ್ಕೆ ಬೆನ್ನುಹಾಕಿ ಪೂರ್ವಕ್ಕೆ ಮುಖಮಾಡಿ ಸೂರ್ಯನಿಗೆ ಅಡ್ಡ ಬೀಳ್ತಿದ್ರು.+
17 ಅವನು ನನಗೆ “ಮನುಷ್ಯಕುಮಾರನೇ, ಇದೆಲ್ಲ ನೋಡಿದ್ಯಾ? ಯೆಹೂದದ ಜನ ಈ ಎಲ್ಲ ಅಸಹ್ಯ ಕೆಲಸಗಳನ್ನ ಮಾಡ್ತಿದ್ದಾರೆ, ದೇಶದಲ್ಲಿ ಹಿಂಸಾಚಾರ ತುಂಬಿಸಿದ್ದಾರೆ,+ ನನ್ನನ್ನ ಕೆಣಕ್ತಾ ಇದ್ದಾರೆ, ಇದೆಲ್ಲ ಒಂದು ಚಿಕ್ಕ ವಿಷ್ಯನಾ? ಅವರು ಕೊಂಬೆಯನ್ನ* ನನ್ನ ಮೂಗಿಗೆ ತಿವೀತಿದ್ದಾರೆ.
18 ಹಾಗಾಗಿ ನಾನು ಅವ್ರಿಗೆ ನನ್ನ ಕೋಪ ತೋರಿಸ್ತೀನಿ. ಅವ್ರನ್ನ ನೋಡಿ ನಾನು ಸ್ವಲ್ಪಾನೂ ಕನಿಕರ ಪಡಲ್ಲ,+ ಅಯ್ಯೋ ಪಾಪ ಅನ್ನಲ್ಲ. ಅವರು ಎಷ್ಟೇ ಜೋರಾಗಿ ಕೂಗಿದ್ರೂ ನಾನು ಅವ್ರ ಕೂಗು ಕೇಳಲ್ಲ”+ ಅಂದ.
ಪಾದಟಿಪ್ಪಣಿ
^ ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಆರನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
^ ಅಕ್ಷ. “ಕೈ.”
^ ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದವು ದೇವದೂತನಿಗೆ ಸಹ ಸೂಚಿಸಬಹುದು.
^ ಅಕ್ಷ. “ಭೂಮಿ ಆಕಾಶದ ಮಧ್ಯ.”
^ ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
^ ಇದು ಮೂರ್ತಿಪೂಜೆಯಲ್ಲಿ ಬಳಸ್ತಿದ್ದ ಕೊಂಬೆ ಆಗಿರಬಹುದು.